ಹಿಜಾಬ್ ಧರಿಸಲು ಅವಕಾಶಕ್ಕಾಗಿ ಪ್ರತಿಭಟನೆ

ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ಸಮುದಾಯದ ಯುವತಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದರು. ಎಸಿ ಕಚೇರಿ ಮುಂಭಾಗದ ಪಿ.ಬಿ. ರಸ್ತೆಯಲ್ಲಿ ಜಮಾಯಿಸಿದ್ದ ಸಮುದಾಯದ ಯುವಕರು ಮತ್ತು ಮುಖಂಡರು ನ್ಯಾಯ ಬೇಕು, ಇನ್ ಕ್ವಿಲಾಬ್ ಜಿಂದಾಬಾದ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳದಿಂದ ತೆರಳುವಂತೆ ಪ್ರತಿಭಟನಾನಿರತರಿಗೆ ಸೂಚನೆ ನೀಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಂಎಸ್‍ಬಿ ಕಾಲೇಜಿನಲ್ಲಿ ಹಿಜಾಬ್ ವಿರೋಧಿಸಿ ಕೇಸರಿ ಶಾಲು

ದಾವಣಗೆರೆ, ಫೆ.8- ನಗರದಲ್ಲೂ ಹಿಜಾಬ್ ವಿವಾದ ಭುಗಿಲೆದಿದ್ದು, ಪರ-ವಿರೋಧದ ಬಿಸಿ ಏರಿದ್ದು, ಹಿಜಾಬ್ ಬೇಕು-ಬೇಡಗಳ ಬಗ್ಗೆ ವಿದ್ಯಾರ್ಥಿ ಸಮೂಹಗಳಿಂದ ಹೋರಾಟ, ಅಸಮಾಧಾನ ವ್ಯಕ್ತವಾಗುತ್ತಿದೆ.

ಕೇಸರಿ ಶಾಲು ಧರಿಸಿ ಹಿಜಾಬ್ ಗೆ ವಿರೋಧ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸುವುದನ್ನು ವಿರೋಧಿಸಿ ವಿದ್ಯಾ ರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದ ಹಿನ್ನೆಲೆಯಲ್ಲಿ ಗಲಾಟೆ ನಡೆದಿದ್ದು, ಪೊಲೀಸರ ಆಗಮನದಿಂದ ಪರಿಸ್ಥಿತಿ ತಿಳಿಕೊಂಡಿದೆ. 

ಇಂದು ಬೆಳಗ್ಗೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಕೆಲವು ಹೊರಭಾಗದಿಂದ ಬಂದಂತವರು ಕೇಸರಿ ಶಾಲು ಹಾಕಿಕೊಂಡು ಕಾಲೇಜು ಪ್ರವೇಶಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ತರಗತಿಯಲ್ಲಿ ಕೇಸರಿ ಶಾಲು ಹಾಕಿಕೊಂಡು ಕುಳಿತಿದ್ದರು. 

ಕಾಲೇಜಿನ ಉಪನ್ಯಾಸಕರು ಕೇಸರಿ ಶಾಲು ಹಾಕಿಕೊಂಡು ಬಂದು ಕುಳಿತಿದ್ದ ವಿದ್ಯಾರ್ಥಿಗಳಿಗೆ ಬುದ್ದಿಮಾತು ಹೇಳಿದರು ಎಂದು ವಿದ್ಯಾರ್ಥಿ ಮೂಲಗಳು ತಿಳಿಸಿವೆ.

ವಿದ್ಯಾರ್ಥಿಯ ಡ್ಯಾನ್ಸ್: ಅಂತೆಯೇ ಈ ಕಾಲೇಜಿನಲ್ಲಿ ಹಿಜಾಬ್ ವಿರೋಧಿಸಿ ವಿದ್ಯಾರ್ಥಿ ಗಳು ಡ್ಯಾನ್ಸ್ ಮಾಡಿದ ಘಟನೆಯೂ ನಡೆದಿದೆ. ಹಿಜಾಬ್ ಧರಿಸಿದವರಿಗೆ ಒಳಗೆ ಪ್ರವೇಶವಿಲ್ಲ ಎಂದು ವಿದ್ಯಾರ್ಥಿಗಳು ಗಲಾಟೆ ಮಾಡಿದ್ದಾರೆ. ಬಳಿಕ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದಾಗಿ ಪಟ್ಟು ಹಿಡಿದಿದ್ದು, ಈ ಸಂಬಂಧ ವಾಗ್ವಾದ ಕೂಡ ನಡೆದಿದೆ.

ನಂತರ ಕಾಲೇಜಿನ ಪ್ರವೇಶ ದ್ವಾರದ ಮುಂದೆಯೇ ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಹಾಕಿಕೊಂಡು ಬೇರೆಯವರು ಒಳಗೆ ಬಾರದಂತೆ ಡ್ಯಾನ್ಸ್ ಮಾಡಿದ್ದಾರೆ. ಮತ್ತೊಂದು ಕಡೆ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಪರ ಘೋಷಣೆಗಳನ್ನು ಕೂಗಿದರು. ಗಲಾಟೆ ಶುರುವಾಗುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಗಲಾಟೆ ನಡೆಸದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕೇಸರಿ ಶಾಲು ಧರಿಸಿ ಕಾಲೇಜಿನಲ್ಲಿ ಓಡಾಟ: ನಗರದ ಎಂಎಸ್‍ಬಿ ಕಲಾ ಮತ್ತು ವಾಣಿಜ್ಯ ಕಾಲೇಜ್‍ನಲ್ಲಿ 10-15 ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಕೇಸರಿ ಶಾಲು ಧರಿಸಿ ಓಡಾಟ ನಡೆಸಿದ್ದಾರೆ. ಈ ವಿದ್ಯಾರ್ಥಿಗಳು ಕಾಲೇಜಿನ ಕ್ಯಾಂಪಸ್ ಪ್ರವೇಶ ಮಾಡಿ, ಕಾರಿಡಾರ್‍ನಲ್ಲಿ ಓಡಾಟ ಮಾಡಿರುವ ವಿಡಿಯೋ ಹರಿದಾಡುತ್ತಿದೆ.

ಕಾಲೇಜಿಗೆ ಬರುವ ವಿದ್ಯಾರ್ಥಿಗಳೆಲ್ಲರೂ ಸಮವಸ್ತ್ರ ಧರಿಸಬೇಕು. ಕೆಲವರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಅದನ್ನು ವಿರೋಧಿಸಿ ನಾವುಗಳು ಕೇಸರಿ ಶಾಲನ್ನು ಹಾಕಿಕೊಂಡು ಹೋಗಿದ್ದೇವೆ. ಅವರು ಹಿಜಾಬ್ ತೆಗೆದು ಬಂದರೆ, ನಾವುಗಳು ಕೇಸರಿ ಶಾಲು ಹಾಕುವುದನ್ನು ಬಿಡುತ್ತೇವೆ ಎಂಬುದು ವಿದ್ಯಾರ್ಥಿಗಳ ಮಾತಾಗಿದೆ.

ಕೆಲವು ಹುಡುಗರು ಕೇಸರಿ ಶಾಲು ಹಾಕಿಕೊಂಡು ಬಂದು ನಮಗೊಂದು ನ್ಯಾಯ, ಅವರಿಗೊಂದು ನ್ಯಾಯ. ಇಂತಹ ತಾರತಮ್ಯ ಏಕೆ? ಎಂಬುದಾಗಿ ಪ್ರಶ್ನಿಸಿದ್ದಾರೆ. ಕಾಲೇಜಿನಲ್ಲಿ ಈಗ ಅಧಿಸೂಚನೆ ಹೊರಡಿಸಿದ್ದು, ಕಡ್ಡಾಯ ಸಮವಸ್ತ್ರ ಮತ್ತು ಗುರುತಿನ ಪತ್ರದೊಂದಿಗೆ ಬರಬೇಕು. ಅವರೆಡೂ ಇದ್ದವರಿಗೆ ನಾಳೆ ಪ್ರವೇಶಕ್ಕೆ ಅವಕಾಶ ಎಂದು ಹೇಳಿದ್ದೇನೆ ಎಂದು ಕಾಲೇಜಿನ ಪ್ರಾಂಶುಪಾಲ ಬಸಪ್ಪ ತಿಳಿಸಿದ್ದಾರೆ.

ಕಾಲೇಜು ಮುಕ್ತಾಯದ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದ ತಕ್ಷಣ ಉಪನ್ಯಾಸ ಕರೊಂದಿಗೆ ಸೇರಿ ಕೇಸರಿ ಶಾಲು ಹಾಕಿಕೊಂಡು ಬಂದವರನ್ನು ಹೊರಗೆ ಕಳುಹಿಸಿದೆವು.

 ಕೆಲವರು ಕಾಲೇಜಿನ ಕಾರಿಡಾರ್‍ನಲ್ಲಿ ಓಡಾಡಿದ್ದಾರೆ. ಆದರೆ ಇಬ್ಬರು ವಿದ್ಯಾರ್ಥಿಗಳು ತರಗತಿಯೊಂದರಲ್ಲಿ ಕೇಸರಿ ಶಾಲು ಹಾಕಿಕೊಂಡು ಕುಳಿತಿದ್ದನ್ನು ಗಮನಿಸಿ ಅದನ್ನು ತೆಗೆದು ಹಾಕಿಸಿರುವುದಾಗಿ ಹೇಳಿದ್ದಾರೆ.

error: Content is protected !!