ದೇಶದ ಪ್ರತಿ ಪ್ರಜೆಯ ಮೇಲೆ ಬಿಜೆಪಿ ಸರ್ಕಾರ ಬೆಲೆ ಏರಿಕೆಯ ಬರೆ ಎಳೆದಿದೆ

ಹರಪನಹಳ್ಳಿ, ಫೆ.8- ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೇಲೆ ನಿಯಂತ್ರಣ ಹಾಕಲಾಗದಷ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಷ್ಕ್ರಿಯವಾಗಿದ್ದು, ದೇಶದ ಪ್ರತಿ ಪ್ರಜೆಯ ಮೇಲೆ ಬಿಜೆಪಿ ಸರ್ಕಾರ ಬೆಲೆ ಏರಿಕೆಯ ಬರೆ ಎಳೆದಿದೆ ಎಂದು ಕೆಪಿಸಿಸಿ ಅಹಿಂದ ಘಟಕದ ರಾಜ್ಯ ಉಪಾಧ್ಯಕ್ಷ ಶಂಕರನಹಳ್ಳಿ ಡಾ.ಉಮೇಶ್‌ಬಾಬು ಆರೋಪಿಸಿದರು.

ತಾಲ್ಲೂಕಿನ ಗರ್ಭಗುಡಿ ಹೊರವಲಯದ ತುಂಗಭದ್ರಾ ನದಿ ತೀರದಲ್ಲಿನ ಶ್ರೀ ವೆಂಕಟೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆನ್‍ಲೈನ್ ಮೂಲಕ ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ಗ್ರಾಮ ಪಂಚಾಯ್ತಿಗಳಿಗೆ ಅನುದಾನ ಒದಗಿಸಲು ಈ ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಗ್ರಾಮಾಡಳಿತದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ಜಿಎಸ್‍ಟಿ ಅನುಷ್ಠಾನದಿಂದಾಗಿ ಹಳ್ಳಿಗಳಲ್ಲಿ ರೈತಾಪಿ ಕುಟುಂಬಗಳು ಹಳೆ ಮಣ್ಣಿನ ಮನೆಗಳನ್ನು ನೆಲಸಮ ಮಾಡಿ, ಸಣ್ಣದೊಂದು ಮನೆ ಕಟ್ಟಿಕೊಳ್ಳಲು ಸಾಧ್ಯವಾಗದಷ್ಟು ಮನೆ ನಿರ್ಮಾಣದ ಕಬ್ಬಿಣ, ಸಿಮೆಂಟ್ ಸೇರಿದಂತೆ ಎಲ್ಲ ಸಾಮಗ್ರಿಗಳ ಮೇಲೆ ಜಿಎಸ್‍ಟಿ ಕೋವಿ ಹಿಡಿದುಕೊಂಡು ನಿಂತಿವೆ. ಹೀಗಾಗಿ, ಮಧ್ಯಮ ವರ್ಗದ ಬದುಕು ದುಸ್ತರವಾಗಿದೆ ಎಂದು ಅವರು ಕಿಡಿ ಕಾರಿದರು.

ನಿಟ್ಟೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಹುಲಿ ಮಾತನಾಡಿ, ಎಂ.ಪಿ.ರವೀಂದ್ರ ಅವರು ತಾಲ್ಲೂಕಿಗೆ 1200 ಕೋಟಿ ಅನುದಾನ ತಂದು, ಕೆರೆ ತುಂಬಿಸುವುದು, ಬ್ರಿಡ್ಜ್-ಕಂ- ಬ್ಯಾರೇಜ್ ನಿರ್ಮಾಣದಂತಹ ಕಾಮಗಾರಿ ಗಳನ್ನು ತಂದರು. ಅವುಗಳನ್ನು ಜಾರಿಗೊಳಿಸದೇ ಶಾಸಕ ಕರುಣಾಕರ ರೆಡ್ಡಿ ಕಾಲಹರಣ ಮಾಡುತ್ತಿದ್ದಾರೆ ಎಂದರು.

ತಾವರಗುಂದಿ ಸೋಮಲಿಂಗಪ್ಪ, ಶೇಖರಪ್ಪ, ಗರ್ಭಗುಡಿ ಮಂಜುನಾಥ್ ಮಾತನಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ, ಹಲವಾಗಲು ಶಿವಾನಂದ್‌, ಆನಂದ್‌, ಸೋಮಪ್ಪ, ಶಫಿವುಲ್ಲಾ, ಗಣೇಶ್‌, ರವಿ, ಇತರರು ಇದ್ದರು.

error: Content is protected !!