ದಾವಣಗೆರೆ, ಫೆ.7- ಗಾನಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ ಹಾಗೂ ಕನ್ನಡದ ಕಬೀರ್ ಎಂದೇ ಕನ್ನಡ ನಾಡಿನಲ್ಲಿ ಹೆಸರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ ಈ ಇಬ್ಬರೂ ಮಹಾನ್ ಚೇತನಗಳು ತಮ್ಮ ಪ್ರತಿಭೆ ಮುಖೇನ ದೇಶಕ್ಕಾಗಿ ದುಡಿದ ಮತ್ತು ಮಿಡಿದ ಹೃದಯಗಳು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಕಂಬನಿ ಮಿಡಿದರು.
ಅವರು, ಇಂದು ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಬ್ರಾಹಿಂ ಸುತಾರ ಹಾಗೂ ಲತಾ ಮಂಗೇಶ್ಕರ್ ಅವರ ನಿಧನದ ಗೌರವಾರ್ಥ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಲತಾ ಮಂಗೇಶ್ಕರ್ ಅವರು ಯಾವುದೇ ಹಾಡನ್ನು ಅನುಭವಿಸಿ ಹಾಡುತ್ತಾ ಆ ಹಾಡಿನ ಅರ್ಥಕ್ಕೆ ಜೀವ ತುಂಬಿ ಜನರಿಗೆ ಮಿಡಿಯು ವಂತೆ ಸುಮಧುರ ಹಾಡನ್ನು ಹಾಡುತ್ತಿದ್ದರು. ಹಾಗಾಗಿಯೇ ಅವರು ಭಾರತೀಯ ಚಿತ್ರ ರಂಗದ ಶ್ರೇಷ್ಠ ಗಾಯಕರಾದರು. ಅಂತೆಯೇ ಇಬ್ರಾಹಿಂ ಸುತಾರರು ವಚನ ಸಾಹಿತ್ಯ, ಶರಣ ಸಾಹಿತ್ಯ, ಸೂಫಿ ಸಾಹಿತ್ಯಗಳ ಮುಖೇನ ಮನಸ್ಸುಗಳನ್ನು ಬೆಸೆಯುವ ಸೌಹಾರ್ದದ ಕನಸುಗಾರರಾಗಿದ್ದರು ಎಂದು ಸ್ಮರಿಸಿದರು.
ಹಿರಿಯ ಪತ್ರಕರ್ತ, ರಂಗಕರ್ಮಿ ಬಾ.ಮ. ಬಸವರಾಜಯ್ಯ ಮಾತನಾಡಿ, ಇಬ್ರಾಹಿಂ ಎನ್. ಸುತಾರ ಅವರು ಭಾವೈಕ್ಯತೆ ಬೆಳೆಸುವ ಅಗಾಧ ಪ್ರಯತ್ನ ಮಾಡಿದ್ದಾರೆ. ಕಳೆದ ಐದು ದಶಕಗಳಿಂದ ನಿರಂತರವಾಗಿ ನಾಡಿನಾದ್ಯಂತ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜ ಸೇವೆಯ ಮುಖಾಂತರ ಸರ್ವ ಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆಯಯ ಸಂದೇಶವನ್ನು ಸಾರಿದ್ದರು ಎಂದು ನುಡಿನ ಮನ ಸಲ್ಲಿಸಿದರು.
ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಕೆ. ರಾಘವೇಂದ್ರ ನಾಯರಿ, ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ತಾಲ್ಲೂಕು ಅಧ್ಯಕ್ಷರಾದ ಸುಮತಿ ಜಯಪ್ಪ, ಎಲ್. ನಾಗವೇಣಿ, ಪ್ರೊ. ದಾದಾಪೀರ್ ನವಿಲೇಹಾಳ್, ಪ್ರೊ. ಜಿ.ಬಿ. ಚಂದ್ರಶೇಖರಪ್ಪ, ಎಸ್.ಎಂ.ಮಲ್ಲಮ್ಮ, ದಾಗಿನಕಟ್ಟೆ ಪರಮೇಶ್ವರಪ್ಪ ಸೇರಿದಂತೆ ಇತರರು ನುಡಿ ನಮನ ಸಲ್ಲಿಸಿದರು.
ಲತಾ ಮಂಗೇಶ್ಕರ್ ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕನ್ನಡ ಚಲನಚಿತ್ರದಲ್ಲಿ ಹಾಡಿದ್ದ ಬೆಳ್ಳನೆ ಬೆಳಗಾಯಿತು ಹಾಡನ್ನು ಜಾನಪದ ಅಕಾಡೆಮಿ ಸದಸ್ಯರಾದ ರುದ್ರಾಕ್ಷಿ ಬಾಯಿ ಪುಟ್ಟ ನಾಯ್ಕ್ ಅವರು ಹಾಡುವ ಮೂಲಕ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ ಧನ್ಯವಾದ ಸಮರ್ಪಿಸಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ. ದಿಳ್ಯೆಪ್ಪ, ನಿವೃತ್ತ ಪ್ರಾಚಾರ್ಯರಾದ ಓ. ನಾಗೇಂದ್ರಪ್ಪ, ಪ್ರೊ. ಮಂಜಣ್ಣ, ಕೆ. ವೀಣಾ, ಎಲ್. ನಾಗವೇಣಿ, ಇಂದಿರಾ ಗುರುಸ್ವಾಮಿ, ಪಾಲಾಕ್ಷಪ್ಪ ಗೋಪನಾಳ್, ಭೈರವೇಶ್ವರ, ಬೇತೂರು ಷಡಾಕ್ಷರಪ್ಪ, ಬಿ.ಎಸ್. ಜಗದೀಶ್, ಗೋಪನಾಳ್ ಕರಿಬಸಪ್ಪ, ಬಕ್ಕೇಶ್ ನಾಗನೂರು, ಪತ್ರಕರ್ತ ಜಿಗಳಿ ಪ್ರಕಾಶ್, ಡಾ. ರುದ್ರಮುನಿ ಹಿರೇಮಠ, ರಾಜೀವ್ ಮಲೇಬೆನ್ನೂರು, ಲೋಕೇಶ್, ಶ್ರೀನಿವಾಸ್, ಕಿರ್ಲೋಸ್ಕರ್ ರಾಜಗೋಪಾಲ್ ಸೇರಿದಂತೆ ಇತರರು ಇದ್ದರು.