ಹಿಜಾಬ್‌ ಧಾರಣೆಗೆ ಅವಕಾಶ ನೀಡಲು ಆಗ್ರಹ

ದಾವಣಗೆರೆ, ಫೆ.7- ಮುಸ್ಲಿಂ ವಿದ್ಯಾರ್ಥಿನಿ ಯರಿಗೆ ಶಿರವಸ್ತ್ರ ಹಾಕಿಕೊಂಡು ಕಾಲೇಜಿಗೆ ಬರಲು ಸಂವಿಧಾನ ಹಕ್ಕನ್ನು ಕೊಡಬೇಕು ಎಂದು ಆಗ್ರಹಿಸಿ ನಗರದಲ್ಲಿಂದು ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ವೇದಿಕೆ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಶಿರವಸ್ತ್ರ ಮುಸ್ಲಿಮರ ಸಾಂವಿಧಾನಿಕ ಹಕ್ಕು. ಅದನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಘೋಷಣೆಗಳನ್ನು ಕೂಗುತ್ತಾ, ಕೆಲ ಕಾಲ ನಿರಂತರ ವಾಗಿ ಪ್ರತಿಭಟಿಸಿ, ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಉಡುಪಿಯ ಪದವಿ ಪೂರ್ವ ಕಾಲೇಜು ಮತ್ತು ರಾಜ್ಯದ ಹಲವು ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಧಾರ್ಮಿಕ ಹಕ್ಕಾಗಿರುವ ಶಿರವಸ್ತ್ರ ಧರಿಸುವುದಕ್ಕೆ ನಿರ್ಬಂಧ ಹೇರುತ್ತಿರುವ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರ ನಡೆ ಕಾನೂನು ವಿರೋಧಿ ಹಾಗು ಅಸಂವಿಧಾನಿಕವಾಗಿದೆ ಎಂದು ಪ್ರತಿಭಟನಾ ಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಮುಸ್ಲಿಂ ಮಹಿಳೆಯರಿಗೆ ನೀಡಿದ ಧಾರ್ಮಿಕ ಸ್ವಾತಂತ್ರ್ಯ ಇದರ ಒಂದು ಭಾಗವಾಗಿದೆ. ಶಿರವಸ್ತ್ರವನ್ನು ಬಿಜೆಪಿ, ಸಂಘ ಪರಿವಾರ ತಮ್ಮ ಹಿಂದೂ ರಾಷ್ಟ್ರ ನಿರ್ಮಾಣದ ಅಜೆಂಡಾದ ಭಾಗವಾಗಿ ತೆಗೆದುಕೊಂಡು ಕೋಮು ಧ್ರುವೀಕರಣ ಮಾಡಲು ಹೊರಟಿದೆ. ಸಾಚಾರ್ ವರದಿಯ ಪ್ರಕಾರ ಮುಸ್ಲಿಂ ಮಹಿಳೆಯರು ಶೈಕ್ಷಣಿಕ ಕ್ಷೇತ್ರದಲ್ಲಿ ಭಾರೀ ಹಿನ್ನಡೆಯಲ್ಲಿದ್ದಾರೆ ಎಂಬ ವರದಿ ಬಹಿರಂಗಗೊಂಡಿತ್ತು. ಅದರ ನಂತರ ನಿರಂತರವಾದ ಜಾಗೃತಿಯಿಂದ ಮುಸ್ಲಿಂ ಮಹಿಳೆಯರು ಶಿಕ್ಷಣ ಹಾಗೂ ಉನ್ನತ ಹುದ್ದೆಯನ್ನು ಪಡೆಯಲು ಸಾಧ್ಯವಾಗಿದೆ. ಇದನ್ನು ಕಂಡು ಸಹಿಸದ ಸಂಘ ಪರಿವಾರ ಮುಸ್ಲಿಂ ಮಹಿಳೆಯರನ್ನು ಭಯಭೀತಗೊಳಿಸಿ ಶಿಕ್ಷಣವನ್ನು ಮೊಟಕುಗೊಳಿಸಬೇಕೆಂಬ ದೃಷ್ಟಿಯಿಂದ ಈ ರೀತಿಯ ಅಜೆಂಡಾಗಳನ್ನು ಸೃಷ್ಟಿ ಮಾಡುತ್ತಿದೆ ಎಂದು ಎಂದು ಆರೋಪಿಸಿದರು.

ಶಿರವಸ್ತ್ರ ಹತ್ತಿಕ್ಕುವಂತಹ ವ್ಯವಸ್ಥಿತ ಷಡ್ಯಂತ್ರವನ್ನು ರೂಪಿಸಿರುವ ಸಂಘ ಪರಿವಾರದ ಕಿರಾತಕರ ವಿರುದ್ಧ ಪೋಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಮಹಿಳೆಯರ ಸಬಲೀಕರಣ ಮತ್ತು ಸುರಕ್ಷತೆಗೆ ಬೇಕಾಗುವ ಎಲ್ಲಾ ರೀತಿಯ ಕ್ರಮಗಳನ್ನು ಸರ್ಕಾರ ಹಾಗೂ ಜಿಲ್ಲಾಡಳಿತ ಕೈಗೊಳ್ಳಬೇಕು. ಈ ವಿವಾದವನ್ನು ಸಂವಿಧಾನ ನೀಡಿರುವ ಹಕ್ಕಿನಂತೆ ನಿಯಂತ್ರಿಸಿ ಹಾಗೂ ಮುಸ್ಲಿಂ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿ ಶಾಲೆಗೆ ಹೋಗುವಂತಹ ವ್ಯವಸ್ಥೆಯನ್ನು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಯಾಸ್ಮಿನ್ ತಾಜ್, ನಿಭಾ ನಾಜ್, ಜಮೀರ್ ಬಾನು, ಅಮ್ರಿನ್ ತಾಜ್, ಸೈಯದಾ ಆಪಾ, ಶಬಾನು ಬಾನು, ಸಫೂರ ಬಾನು, ಮುಜೀಬಾ ಆಪಾ, ಖುರತ್ ಉಲ್ ಐನ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಡಿವೈಎಸ್ಪಿ ನರಸಿಂಹ ತಾಮ್ರಧ್ಬಜ, ಸಿಪಿಐ ಗುರುಬಸವರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

error: Content is protected !!