ಹಿಜಾಬ್ ವಿರೋಧಿಸಿ ಹಿಂಜಾವೇ ಪ್ರತಿಭಟನೆ

ದಾವಣಗೆರೆ, ಫೆ.7- ಕಾಲೇಜಿನಲ್ಲಿ ಬುರ್ಕಾ ಅಥವಾ ಹಿಜಾಬ್ ಧರಿಸುವುದನ್ನು ವಿರೋಧಿಸಿ, ನಗರದಲ್ಲಿಂದು ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಯುವ ವಾಹಿನಿ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಸಂಘಟನೆಗಳ ಪದಾಧಿಕಾರಿಗಳು, ಕೇಸರಿ ಶಾಲು ಹಾಕಿಕೊಂಡು, ಸಮವಸ್ತ್ರ ಧರಿಸಿ, ಹಿಂದೂಸ್ಥಾನದಲ್ಲಿ ಇರುವುದಾದರೆ ಹಿಂದೂ ಹೇಳಿದಂಗೆ ಕೇಳಬೇಕು ಎಂದು ಘೋಷಣೆ ಕೂಗಿದರು. ಅಲ್ಲದೇ ಕಾಲೇಜಿ ನಲ್ಲಿ ಕಡ್ಡಾಯ ಸಮವಸ್ತ್ರಕ್ಕಾಗಿ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಆಗ್ರಹಿಸಿದರು.

ಜಿಲ್ಲೆಯ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಹೆಗ್ಗುರುತಾಗಿದ್ದ ಸಮವಸ್ತ್ರ ಧಾರಣೆ ಕುರಿತು ಮತೀಯ ಸಂಘಟನೆಗಳು ಶಾಲಾ ಶೈಕ್ಷಣಿಕ ಸಾಮರಸ್ಯವನ್ನು ಕದಡುವ ಉದ್ದೇಶದಿಂದ ಒಂದು ಕೋಮಿನ ವಿದ್ಯಾರ್ಥಿಗಳನ್ನು ಪ್ರಚೋದನೆಗೆ ಒಳಪಡಿಸಿ ಬುರ್ಕಾ/ಹಿಜಾಬ್ ಧರಿಸಿ ಕಾಲೇಜಿನ ಆವರಣದೊಳಗೆ ಪ್ರವೇಶಿಸಲು ಪ್ರಯತ್ನಿಸುವ ಘಟನೆಗಳು ನಡೆಯುತ್ತಿವೆ. ಅಲ್ಲದೇ ದಿನದಿಂದ ದಿನಕ್ಕೆ ಹಿಜಾಬ್ ವಿಷಯವನ್ನು ನೆಪವಾಗಿಸಿಕೊಂಡು ಇದೊಂದು ಅಂತರರಾಷ್ಟ್ರೀಯ ಮಟ್ಟದ ಸಮಸ್ಯೆ ಎನ್ನುವ ರೀತಿಯಲ್ಲಿ ಬಿಂಬಿಸುವ ಕೆಲಸವೂ ನಡೆಯುತ್ತಿದ್ದು, ಇದರ ಹಿಂದೆ ಕೆಲ ಮತೀಯ ಸಂಘಟನೆಗಳ ಕೈವಾಡವಿರುವುದಾಗಿ ಪ್ರತಿಭಟನಾ ಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಒಂದು ವೇಳೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಈ ಷಡ್ಯಂತ್ರದ ಒತ್ತಡಕ್ಕೆ ಮಣಿದು ಹಿಜಾಬ್ ಧರಿಸಲು ಅವಕಾಶ ನೀಡಿದ್ದಲ್ಲಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳ ಹಿಂದೂ ವಿದ್ಯಾರ್ಥಿಗಳನ್ನು ಸಂಘಟಿಸಿ ಸಮವಸ್ತ್ರದ ಜೊತೆಗೆ ಕೇಸರಿ ಶಲ್ಯ ಧರಿಸುವ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಹಿಂಜಾವೇ ಮುಖಂಡ ಸತೀಶ್ ಪೂಜಾರಿ, ಹಿಂದೂ ಯುವ ವಾಹಿನಿ ಜಿಲ್ಲಾ ಸಂಯೋಜಕ ಎಲ್.  ಚೇತನ್, ಉಮೇಶ್ ಕತ್ತಿ, ವಿಶ್ವನಾಥ್, ಶಿವಾಜಿ, ಸಂತೋಷ್, ಪುನೀತ್, ಮಂಜುನಾಥ, ಚಂದ್ರು, ಕೀರ್ತಿ ಗೌಡ, ಚಿನ್ಮಯ್, ಗುರುಚರಣ್,  ಗಿರೀಶ್ ಪ್ರಸಾದ್, ವೀರೇಶ್, ಕಿರಣ್, ಲಿಂಗರಾಜು, ಭಾನುಪ್ರಕಾಶ್, ರುದ್ರೇಶ್, ದಿವ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.

ಪೊಲೀಸ್ ಬಂದೋಬಸ್ತ್: ಪ್ರತಿಭಟನೆ ಹಿನ್ನೆಲೆಯಲ್ಲಿ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಸಿಪಿಐ ಗುರುಬಸವರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

error: Content is protected !!