ಎಲ್ಲಾ ಧರ್ಮ, ಭಾಷೆಗಳಿಂದಾಗಿ ಭಾರತ ಮಾದರಿ

ಹಳ್ಳಿಹಾಳ್ : ಶ್ರೀ ಮುರುಡ ಬಸವೇಶ್ವರ ದೇಗುಲ ಲೋಕಾರ್ಪಣೆ ಸಮಾರಂಭದಲ್ಲಿ ಶಾಸಕ ಲಿಂಗೇಶ್ ಅಭಿಮತ

ಮಲೇಬೆನ್ನೂರು, ಫೆ.7- ಧರ್ಮ ಮತ್ತು ಅಧ್ಯಾತ್ಮ ಭಾರತದ ಜೀವಾಳವಾಗಿದ್ದು ಸಂಸ್ಕಾರ, ಸಂಸ್ಕೃತಿ, ಸೌಹಾರ್ದತೆ, ಸಹಬಾಳ್ವೆ ದೇಶದಲ್ಲಿ ಗಟ್ಟಿಯಾಗಿ ಉಳಿದಿದೆ ಎಂಬುದಕ್ಕೆ ಈ ಧಾರ್ಮಿಕ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಹಾಸನ ಜಿಲ್ಲೆ ಬೇಲೂರು ಕ್ಷೇತ್ರದ ಶಾಸಕ ಲಿಂಗೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಸೋಮವಾರ ಹಳ್ಳಿಹಾಳ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮದ ಆರಾಧ್ಯ ದೈವ ಶ್ರೀ ಮುರುಡ ಬಸವೇಶ್ವರ ಸ್ವಾಮಿಯ ದೇವಸ್ಥಾನ ಲೋಕಾರ್ಪಣೆ ಮತ್ತು ದೇವರಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮಗಳ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ನೊಳಂಬರಾದ ನಾವು ರಾಜಮನೆತನಕ್ಕೆ ಸೇರಿದವರು, 8 ರಿಂದ 11ನೇ ಶತಮಾನದವರೆಗೆ ತುಮಕೂರು ಮತ್ತು ಆಂಧ್ರಪ್ರದೇಶ, ತಮಿಳು ನಾಡಿನ ಕೆಲವು ಭಾಗಗಳಲ್ಲಿ ನೊಳಂಬರು ಆಳ್ವಿಕೆ ನಡೆಸಿದ್ದು, ರಾಷ್ಟ್ರಕೂಟರು, ಚಾಲುಕ್ಯರು, ಗಂಗರ ಸರಿಸಮಾನವಾಗಿ ಆಳ್ವಿಕೆ ನಡೆಸಿದ್ದೇವೆ. ಪಲ್ಲವರು ಮತ್ತು ನೊಳಂಬರು ಒಂದೇ ಆಗಿದ್ದು, ನಮ್ಮ ರಾಜ್ಯ ಲಾಂಛನ ನಂದಿ ಮತ್ತು ಶ್ರೀ ಗುರು ಸಿದ್ದರಾಮೇಶ್ವರರು ನಮ್ಮ ಗುರುಗಳಾಗಿದ್ದಾರೆ ಎಂದು ಶಾಸಕ ಲಿಂಗೇಶ್ ಹೇಳಿದರು.

ಶಾಸಕ ಎಸ್.ರಾಮಪ್ಪ ಮಾತನಾಡಿ, ಶಾಸಕ ಲಿಂಗೇಶ್ ಅವರ ಅಭಿಪ್ರಾಯಗಳಿಗೆ ಬೆಂಬಲ ವ್ಯಕ್ತಪಡಿಸಿ, ಅಂಬೇಡ್ಕರ್ ಅವರ ಸಂವಿಧಾನದಿಂದಾಗಿ ದೇಶದಲ್ಲಿ ಶಾಂತಿ, ಸಾಮರಸ್ಯ ಮತ್ತು ಅಧ್ಯಾತ್ಮ ನೆಲೆಸಿದೆ.

ಅಭಿವೃದ್ಧಿ ವಿಷಯದಲ್ಲಿ ನಾನು ಜಾತಿ, ಪಕ್ಷ ಮಾಡಿಲ್ಲ. ಕೆಲಸ ಮತ್ತು ಅನುದಾನ ಕೇಳಿದ ವರಿಗೆ ಕೈಲಾದಷ್ಟು ಸ್ಪಂದಿಸಿದ್ದೇನೆ. ಕೋವಿಡ್ ಕಾರಣ ಹೇಳಿ ಸರ್ಕಾರ ಅನುದಾನ ನೀಡುತ್ತಿಲ್ಲ. ಆದರೂ ಈ ದೇವಸ್ಥಾನಕ್ಕೆ ಅಗತ್ಯವಿರುವ 10 ಲಕ್ಷ ರೂ.ಗಳನ್ನು ಶಾಸಕ ಅನುದಾನದಲ್ಲಿ ನೀಡುತ್ತೇನೆಂದು ರಾಮಪ್ಪ ಹೇಳಿದರು.

ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಮಾತನಾಡಿ, ಧರ್ಮ ಆಚರಣೆಯಿಂದ ಉಳಿಯುತ್ತಿದೆಯೋ ಹೊರತು, ಭಾಷಣದಿಂದಲ್ಲ. ಈ ದೇವಸ್ಥಾನ ಭಕ್ತರ ಬೆವರಿನ ಶ್ರಮದ ಪ್ರತಿಫಲವಾಗಿದೆ. ನಾನು ಶಾಸಕನಾಗಿದ್ದಾಗ ಅನುದಾನ ನೀಡಿದ್ದೇನೆ. ದೇವಸ್ಥಾನಗಳು ಹಳ್ಳಿಗಳಲ್ಲಿ ಶಾಂತಿ, ಸಾಮರಸ್ಯ ಮೂಡಿಸಲು ಸಹಕಾರಿಯಾಗಬೇಕು. ಹಣದಿಂದ ಏನೂ ಸಾಧ್ಯವಿಲ್ಲ. ಗುಣದಿಂದ ಎಲ್ಲವೂ ಸಾಧ್ಯ ಎಂಬುದನ್ನು ಹಳ್ಳಿಹಾಳ್ ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ ಎಂದರು.

ಆವರಗೊಳ್ಳ ಶ್ರೀ ಕ್ಷೇತ್ರದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಯಲವಟ್ಟಿ ಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿದರು.

ಶ್ರೀ ಮುರುಡ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಹೆಚ್.ಈರನಗೌಡ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ದೇವಸ್ಥಾನಕ್ಕೆ ನೆರವು ನೀಡಿದ ವ್ಯಕ್ತಿಗಳನ್ನು ಹಾಗೂ ದೇವಸ್ಥಾನ ಶಿಲ್ಪಿ ರಾಮಾಂ ಜನಪ್ಪ ಗೋಪುರ ಶಿಲ್ಪಿ ಗಣೇಶ್, ತರಗಾರ ಹೊನ್ನಪ್ಪ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕ ಬಿ.ಪಿ.ಹರೀಶ್, ನಂದಿ ಸೌಹಾರ್ದ ಸಹಕಾರಿ ಅಧ್ಯಕ್ಷ ಜಿಗಳಿ ಇಂದೂಧರ್, ಎಪಿಎಂಸಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಜಿ.ಪಂ. ಮಾಜಿ ಸದಸ್ಯ ಎಂ.ನಾಗೇಂದ್ರಪ್ಪ, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ತಾ. ಜೆಡಿಎಸ್ ಅಧ್ಯಕ್ಷ ಹೆಚ್.ಟಿ.ಪರಮೇಶ್ವರಪ್ಪ, ತಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್, ವಾಸನದ ಬಸವರಾಜಪ್ಪ, ಹಿಂಡಸಘಟ್ಟ ಮುರುಗೇಶ್, ಭದ್ರಾ ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ವೈ.ದ್ಯಾವಪ್ಪ ರೆಡ್ಡಿ, ವಕೀಲ ನಂದಿತಾವರೆ ತಿಮ್ಮನಗೌಡ, ಗ್ರಾ.ಪಂ. ಸದಸ್ಯರಾದ ಹುಲ್ಮನಿ ಬಸವನಗೌಡ, ಸುಮ ಬಸವನಗೌಡ, ಗೌರಮ್ಮ ಧರ್ಮರಾಜ್, ಈರಮ್ಮ ಚಂದ್ರಶೇಖರ್ ಮತ್ತು ಯು.ಎನ್.ಶಿವನಗೌಡ ಮತ್ತಿತರರು ಭಾಗವಹಿಸಿದ್ದರು.

ಗ್ರಾಮದ ಹೆಚ್.ಎಸ್.ಮಲ್ಲನಗೌಡ ಸ್ವಾಗ ತಿಸಿದರು. ಬಿ.ಎನ್.ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಶೀಲಾ ನಿರೂಪಿ ಸಿದರು. ಗ್ರಾಮದ ಹೆಚ್.ವೀರನಗೌಡ ವಂದಿಸಿದರು.

error: Content is protected !!