ರಾಣೇಬೆನ್ನೂರು, ಫೆ. 7- ಕ್ಷಯರೋಗ ಪತ್ತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಅತ್ಯಾಧುನಿಕ ಯಂತ್ರವನ್ನು ತಾಲ್ಲೂಕಿಗೆ ಕೊಡುಗೆ ನೀಡಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ನಗರದ ಹಲಗೇರಿ ರಸ್ತೆಯಲ್ಲಿರುವ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಕ್ಷಯರೋಗ ವಿಭಾಗದಲ್ಲಿ ಶನಿವಾರ ಕ್ಷಯರೋಗ ಪತ್ತೆ ಮಾಡುವ ಯಂತ್ರವನ್ನು (ಸಿಬಿನ್ಯಾಟ್) ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕ್ಷಯರೋಗವನ್ನು 2025ಕ್ಕೆ ನಿರ್ಮೂಲನೆ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಹೀಗಾಗಿ ಕ್ಷಯರೋಗವನ್ನು ಬಹುಬೇಗ ಪತ್ತೆ ಮಾಡುವ ಹಿನ್ನೆಲೆಯಲ್ಲಿ ಈ ಯಂತ್ರವನ್ನು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಪೂರೈಕೆ ಮಾಡಿದೆ. ಇದರ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ನಗರದ ಕ್ಷಯರೋಗ ಆರೋಗ್ಯ ಸಂದರ್ಶಕ ಗಿರೀಶ್ ಮುರನಾಳ ಮಾತನಾಡಿ, ಕ್ಷಯರೋಗ ಪತ್ತೆ ಹಚ್ಚಲು ಡಿಎನ್ಎ ಹಾಗೂ ಆರ್ಎನ್ಎ ಸಿಬಿನ್ಯಾಟ್ (ಕಾಟ್ರೇಜ್ ಬೇಸ್ಡ್ ನ್ಯೂಕ್ಲಿಕ್ ಅಪ್ಲಿಕೇಷನ್ ಟೆಸ್ಟ್) ಮುಖಾಂತರ ಪಿಸಿಆರ್ನಲ್ಲಿ (ಪಾಲಿಮರ್ ಚೈನ್ ರಿಯಾಕ್ಷನ್) ಕ್ಷಯರೋಗದ ಮೊದಲ ಹಂತ ಹಾಗೂ ಎರಡನೆಯ ಹಂತ ಎಂಡಿಆರ್ (ಮಲ್ಟಿ ಡ್ರಗ್ ರೆಸಿಸ್ಟೆನ್ಸ್) ಪತ್ತೆ ಹಚ್ಚಿ ರೋಗಿಗೆ ಅತಿ ಶೀಘ್ರದಲ್ಲಿಯೇ ಚಿಕಿತ್ಸೆ ನೀಡಲು ಈ ಯಂತ್ರ ಸಹಕಾರಿಯಾಗಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂತೋಷ್ಕುಮಾರ್, ಸಾರ್ವಜನಿಕ ಆಡಳಿತಾಧಿಕಾರಿ ಡಾ.ಪರಮೇಶ್ವರಪ್ಪ ಮಾತನಾಡಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಡಾ.ರಾಜು ಶಿರೂರ, ಹಿರಿಯ ಕ್ಷಯರೋಗ ಪ್ರಯೋಗ ಶಾಲಾ ಮೇಲ್ವಿಚಾರಕ ಹಸನ್ಸಾಬ್ ಹುಬ್ಬಳ್ಳಿ, ಆರೋಗ್ಯ ಇಲಾಖೆಯ ಇತರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.