ರಾಜ್ಯದಲ್ಲಿ 60 ಲಕ್ಷ ಸದಸ್ಯತ್ವ ನೋಂದಣಿ ಗುರಿ : ಉಗ್ರಪ್ಪ
ದಾವಣಗೆರೆ, ಫೆ. 7- ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯದಲ್ಲಿ ಮಾರ್ಚ್ 31 ರವರೆಗೆ 60 ಲಕ್ಷ ಡಿಜಿಟಲ್ ಸದಸ್ಯತ್ವ ನೋಂದಣಿ ಮಾಡುವ ಗುರಿ ಹೊಂದಲಾಗಿದೆ ಎಂದು ಪಕ್ಷದ ವೀಕ್ಷಕ ವಿ.ಎಸ್. ಉಗ್ರಪ್ಪ ಹೇಳಿದರು.
ಇಂದು ಎಸ್.ಎಸ್. ಮಲ್ಲಿಕಾರ್ಜುನ್ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಸದಸ್ಯರಿಂದ ನೋಂದಣಿ ಗೆ 5 ರೂ. ಹಾಗೂ ಡಿಜಿಟಲ್ ಗುರುತಿನ ಚೀಟಿಗೆ 10 ರೂ. ಸೇರಿ ಒಟ್ಟು 15 ರೂ. ಶುಲ್ಕ ಸಂಗ್ರಹಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 25 ಸಾವಿರ ಡಿಜಿಟಲ್ ಸದಸ್ಯರನ್ನು ನೋಂದಣಿ ಮಾಡಿಕೊಳ್ಳಲಾಗುವುದು ಎಂದರು.
ಮಾರ್ಚ್ 31 ರ ನಂತರ ಸದಸ್ಯತ್ವ ಮಾಡಿಕೊಳ್ಳಲಾಗುವುದು. ಆದರೆ, ಅವರಿಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಇರುವುದಿಲ್ಲ. ಬೂತ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಅಂಕಿ-ಅಂಶಗಳನ್ನೊಳಗೊಂಡ ದಾಖಲೆಗಳನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು.
ಇದುವರೆಗೂ ಪುಸ್ತಕ ರೂಪದಲ್ಲಿ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಆದರೆ ಇದೀಗ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಎಲ್ಲಾ ಹಂತಗಳಲ್ಲೂ, ಎಲ್ಲಾ ವರ್ಗದ ಜನರಿಗೆ ಪಕ್ಷದ ಸದಸ್ಯತ್ವ ನೀಡುವ ಉದ್ದೇಶವನ್ನು ಪಕ್ಷ ಹೊಂದಿದೆ ಎಂದು ತಿಳಿಸಿದರು.
ಎಐಸಿಸಿ, ಕೆಪಿಸಿಸಿಯ ತೀರ್ಮಾನಗಳು, ರಾಷ್ಟ್ರೀಯ ವರಿಷ್ಠರ ತೀರ್ಮಾನಗಳ ಮಾಹಿತಿಯನ್ನು ಪಕ್ಷದ ಬೇರು ಮಟ್ಟದ ಕಾರ್ಯಕರ್ತರಿಗೂ ತಿಳಿಸಲು ಡಿಜಿಟಲ್ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನೀತಿ ಸಂಹಿತೆ ಜಾರಿಗೊಳಿಸುವ ಬಗ್ಗೆ ಪಕ್ಷದ ನಿಲುವೇನು? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವಿ.ಎಸ್. ಉಗ್ರಪ್ಪ ಅವರು, ಶಿಕ್ಷಣದಲ್ಲಿ ಧರ್ಮಾಧಾರಿತ ರಾಜಕಾರಣಕ್ಕೆ ಅವಕಾಶವಿರುವುದಿಲ್ಲ. ಶಿಕ್ಷಣದಲ್ಲಿ ಕೋಮುವಾದ ಸೇರಿಸುವುದು ಸಲ್ಲದು. ಉಭಯ ಕೋಮಿನವರು ಪರಸ್ಪರ ಸೌಹಾರ್ದ ಭಾವನೆಯಿಂದ ಇರಬೇಕು. ಪ್ರತಿಷ್ಠೆಗೆ ಹೋಗಿ ವಿದ್ಯಾರ್ಥಿಗಳಲ್ಲಿ ವೈಮನಸ್ಸು ಬರುವಂತಹ ವಾತಾವರಣ ಸೃಷ್ಟಿಸುವುದು ಬೇಡ ಎಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯವರಿಗೆ ಸಂವಿಧಾನದ ಆಶಯಗಳ ಬಗ್ಗೆ ಅರಿವಿಲ್ಲ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಮನಸೋ ಇಚ್ಛೆ ಅಧಿಕಾರ ನಡೆಸುತ್ತಿದ್ದಾರೆಂದು ಕಿಡಿ ಕಾರಿದರು.
ನದಿ ಜೋಡಣೆ ಬಗ್ಗೆ ಯಾವ ರಾಜ್ಯದಿಂದ ಪ್ರಸ್ತಾಪ ಬಾರದಿದ್ದರೂ ಪ್ರಧಾನಿಯವರು ಏಕಪಕ್ಷೀಯ ನಿರ್ಧಾರ ಕೈಗೊಂಡು, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದರು.