ಕಾಂಗ್ರೆಸ್ ಮುಖಂಡರಿಗೆ ಸಚಿವ ಈಶ್ವರಪ್ಪ ತಿರುಗೇಟು
ಹೊನ್ನಾಳಿ, ಫೆ.7- ಕಾಂಗ್ರೆಸ್ ಮುಖಂಡರು ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯನ್ನು ಕೈಬಿಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಮುಖಂಡರು ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ. ವಿಧಾನಸಭೆಯ ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹಾಗೂ ಇತರರು ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಕಾಲೇಜುಗಳಿಗೆ ಬರಬೇಕು ಎಂಬುದಾಗಿ ಬಹಿರಂಗ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು.
ಮನೆ, ಮಸೀದಿ, ಚರ್ಚ್‍ಗಳಲ್ಲಿ ಧರ್ಮವನ್ನು ಆಚರಿಸಬೇಕು. ಶಾಲಾ-ಕಾಲೇಜುಗಳಿಗೆ ಸಮವಸ್ತ್ರ ಧರಿಸಿ ಬರಬೇಕು. ಶಿಸ್ತು ಕಾಪಾಡಲು ಸಮವಸ್ತ್ರ ನೀತಿ ಜಾರಿಗೊಳಿಸಲಾಗಿದೆ. 1918ರಲ್ಲೇ ಕೇರಳ ಸರ್ಕಾರ ಸಮವಸ್ತ್ರ ಧರಿಸುವ ಕುರಿತು ಸ್ಪಷ್ಟ ನಿಲುವು ತಾಳಿದೆ. ಕೋರ್ಟ್ ಕೂಡ ಈ ಹಿಂದೆ ಸಮವಸ್ತ್ರದ ಬಗ್ಗೆ ತನ್ನ ನಿಲುವು ಪ್ರಕಟಿಸಿದೆ. ಆದ್ದರಿಂದ ಎಲ್ಲಾ ಧರ್ಮಗಳ ವಿದ್ಯಾರ್ಥಿಗಳೂ ಸಮವಸ್ತ್ರ ಧರಿಸಿ ಶಾಲಾ-ಕಾಲೇಜುಗಳಿಗೆ ಆಗಮಿಸಬೇಕು ಎಂದು ತಿಳಿಸಿದರು.
ಬೀದಿ ರಂಪ ಬೇಡ: ಶಾಸಕ ಎಂ.ಪಿ. ರೇಣುಕಾಚಾರ್ಯ ಸಚಿವ ಸ್ಥಾನಕ್ಕೆ ಅರ್ಹರು. ಆದರೆ, ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಂದ ಬಿಜೆಪಿಗೆ ಬಂದಿರುವ 15 ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕಾಗಿರುವ ಕಾರಣಕ್ಕೆ ನಮ್ಮ ಶಾಸಕರು ತ್ಯಾಗ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸಿದರೆ ಈ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಹೇಳಿದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಶಾಸಕ ಎಂ.ಪಿ. ರೇಣುಕಾಚಾರ್ಯ ಸಚಿವ ಸ್ಥಾನದ ಬಗ್ಗೆ ಮಾಧ್ಯಮಗಳಿಗೆ ಅನಗತ್ಯ ಹೇಳಿಕೆ ನೀಡುವುದು ತರವಲ್ಲ. ಹಾದಿ-ಬೀದಿ ರಂಪ ಮಾಡಬಾರದು. ಇವರು ಹೀಗೆ ಮಾಡುವುದರಿಂದ ಪ್ರತಿಪಕ್ಷದವರಿಗೆ ಆಹಾರವಾಗುತ್ತಾರೆ. ಹಾಗಾಗಿ, ಪಕ್ಷಕ್ಕೆ ಮುಜುಗರವನ್ನುಂಟುಮಾಡುವ ಹೇಳಿಕೆಗಳನ್ನು ನೀಡಬಾರದು ಎಂದು ಸೂಚ್ಯವಾಗಿ ತಿಳಿಸಿದರು.
ಶಾಸಕ ಎಂ.ಪಿ. ರೇಣುಕಾಚಾರ್ಯ, ಜಿಪಂ ಮಾಜಿ ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರಕೆರೆ ಎ.ಎಂ. ನಾಗರಾಜ್, ಮುಖಂಡರಾದ ಎ.ಬಿ. ಹನುಮಂತಪ್ಪ, ಕೆ.ಪಿ. ಕುಬೇರಪ್ಪ, ರಂಗಪ್ಪ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.