ಹರಿಹರ : ಸಪ್ತರ್ಷಿ ಯೋಗ ಸ್ಪೋರ್ಟ್ಸ್ ಅಕಾಡೆಮಿ – ಕಲರ್ಸ್ ಸ್ಕೂಲ್ ಸಹಯೋಗದಲ್ಲಿ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ
ಹರಿಹರ, ಫೆ. 6 – ನಮಗೆಲ್ಲಾ ಆರೋಗ್ಯವನ್ನು ನೀಡುವ ಶಕ್ತಿ ಯೋಗದಲ್ಲಿದೆ. ರೋಗ ಮುಕ್ತವಾದ ಜೀವನ ನಡೆಸಲು ಯೋಗ ಅವಶ್ಯಕ ಎಂದು ದಾವಣಗೆರೆ ಬಸವ ಕೇಂದ್ರ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದ್ದಾರೆ.
ನಗರದ ಸಪ್ತರ್ಷಿ ಯೋಗ ಸ್ಪೋರ್ಟ್ಸ್ ಅಕಾಡೆಮಿ ಕಲರ್ಸ್ ಸ್ಕೂಲ್ ಸಹಯೋಗದೊಂದಿಗೆ ಕಲರ್ಸ್ ಸ್ಕೂಲ್ ಆವರಣದಲ್ಲಿ ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಸೂಚನೆಯಂತೆ ವಿಶ್ವ ದಾಖಲೆಯ 75 ಕೋಟಿ ಸೂರ್ಯ ನಮಸ್ಕಾರದ 13 ಸುತ್ತು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.
ಯೋಗ ಕೇವಲ ಒಂದು ಜಾತಿಗೆ, ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ವಿಶ್ವದ ಎಲ್ಲಾ ಮಾನವ ಜನಾಂಗಕ್ಕೆ ಯೋಗ ಅವಶ್ಯ.
ಯಾರು ಒಳ್ಳೆಯ ಆರೋಗ್ಯ ಬಯಸುತ್ತಾರೋ, ಯಾರು ಯಾವುದೇ ಔಷಧಿಯ ಬಳಕೆಯಿಲ್ಲದೇ ಆತ್ಮಸ್ಥೈರ್ಯದಿಂದ, ನೆಮ್ಮದಿಯೊಂದಿಗೆ ಬದುಕು ಸಾಗಿಸಲು ಇಷ್ಟಪಡುತ್ತಾರೋ ಅವರೆಲ್ಲರೂ ಯೋಗ ಕಲಿಯಬಹುದು ಎಂದರು.
ನಗರಸಭೆ ಸದಸ್ಯರೂ, ಸಪ್ತರ್ಷಿ ಯೋಗ ಕೇಂದ್ರದ ಗೌರವಾಧ್ಯಕ್ಷರೂ ಆದ ಶಂಕರ್ ಖಟಾವ್‌ಕರ್ ಮಾತನಾಡಿ, ಯೋಗದಿಂದ ಉತ್ತಮ ಆರೋಗ್ಯವನ್ನು ಪಡೆಯಲು ಸಾಧ್ಯ. ಯೋಗದಿಂದ ಏಕಾಗ್ರತೆ ಬರುತ್ತದೆ. ಮನಸ್ಸು ಶಾಂತವಾಗಿರುತ್ತದೆ. ಇದರಿಂದ ವ್ಯಾಸಂಗಕ್ಕೂ ಸಹಾಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಲರ್ಸ್ ಸ್ಕೂಲ್ ವ್ಯವಸ್ಥಾಪಕ ಡಿ.ಕೃಷ್ಣ ಮಾತನಾಡಿ, ಈಗಿನಿಂದಲೇ ನೀವು ಯೋಗ ಕಲಿತರೆ ಅದರಿಂದ ಉತ್ತಮ ಆರೋಗ್ಯ ಪಡೆಯಬಹುದು ಎಂದರು.
ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕು. ಪ್ರೇರಣಾ ಯೋಗ ನೃತ್ಯ ಪ್ರದರ್ಶಿಸಿದರು. 108 ಮಕ್ಕಳು 13 ಸುತ್ತು ಸೂರ್ಯ ನಮಸ್ಕಾರ ಪ್ರದರ್ಶಿಸಿದರು.
ಸಪ್ತರ್ಷಿ ಯೋಗ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ಡಾ.ಕೆ.ಜೈಮುನಿ, ಪತಂಜಲಿ ಯೋಗ ಕೇಂದ್ರದ ಶ್ರೀಮತಿ ರತ್ನಮ್ಮ ಉಪಸ್ಥಿತರಿದ್ದರು.
ಸಪ್ತರ್ಷಿ ಯೋಗ ಸ್ಪೋರ್ಟ್ಸ್ ಅಕಾಡೆಮಿ ಕಾರ್ಯದರ್ಶಿ ಡಿ.ಫ್ರಾನ್ಸಿಸ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಸಲಹೆಗಾರ ಸುಬ್ರಹ್ಮಣ್ಯ ನಾಡಿಗೇರ್ ಸ್ವಾಗತಿಸಿದರು. ನಿರಂಜನ ವಂದಿಸಿದರು.