ಲತಾ ಮಂಗೇಶ್ಕರ್ ಹೆಸರಿನಲ್ಲಿ ಸಂಗೀತ ವಿಶ್ವವಿದ್ಯಾಲಯ ಸ್ಥಾಪನೆಗೆ ಚನ್ನಗಿರಿ ಕಸಾಪದ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಬಸವಾಪಟ್ಟಣ ಒತ್ತಾಯ
ಚನ್ನಗಿರಿ, ಫೆ.6- ಕನ್ನಡದ ಕಬೀರ ಖ್ಯಾತಿಯ ಇಬ್ರಾಹಿಂ ಸುತಾರ್ ಮತ್ತು ಭಾರತದ ಕೋಗಿಲೆ ಖ್ಯಾತಿಯ ಭಾರತ ರತ್ನ ಲತಾ ಮಂಗೇಶ್ಕರ್ ಇವರಿಬ್ಬರು ಸಾಂಸ್ಕೃತಿಕ ಲೋಕದ ದಿಗ್ಗಜರಾಗಿದ್ದು, ಅವರಿಬ್ಬರ ಅಗಲಿಕೆಯಿಂದ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಚನ್ನಗಿರಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವಾಪಟ್ಟಣದ ಎಲ್.ಜಿ.ಮಧುಕುಮಾರ್ ತಿಳಿಸಿದರು.
ಚನ್ನಗಿರಿಯ ನಿವೃತ್ತ ನೌಕರರ ಭವನದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಇಬ್ರಾಹಿಂ ಸುತಾರ್ ಮತ್ತು ಲತಾ ಮಂಗೇಶ್ಕರ್‌ರವರ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಬ್ರಾಹಿಂ ಸುತಾರ್ ಅವರು ಬಸವಣ್ಣನವರ ತತ್ವಾಭಿಮಾನಿಯಾಗಿ ಸರ್ವ ಧರ್ಮಗಳ ಭಾವೈಕ್ಯತೆ ಮತ್ತು ಸಮಾನತೆಯನ್ನು ಸಾರುವ ಪ್ರವಚನಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಿದ್ದರು. ಲತಾ ಮಂಗೇಶ್ಕರ್ ವೈಯಕ್ತಿಕ ಜೀವನಕ್ಕೆ ಅಷ್ಟೇನೂ ಲಕ್ಷ್ಯ ಕೊಡದೇ ವಿಶ್ವದ ಮೂವತ್ತಾರು ಭಾಷೆಗಳಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹೇಳುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಗೊಂಡು ಸಂಗೀತ ಲೋಕದ ಮೇರು ಪರ್ವತ ವಾಗಿ ಚರಿತ್ರೆಯಲ್ಲಿ ಅಜರಾಮರಾಗಿದ್ದಾರೆ. ಸರ್ಕಾರ ಗಳು ಲತಾ ಮಂಗೇಶ್ಕರ್ ಸಾಧನೆಯನ್ನು ಪರಿಗಣಿಸಿ, ಅವರ ಹೆಸರಿನಲ್ಲಿ ಸಂಗೀತ ವಿಶ್ವವಿದ್ಯಾಲಯವನ್ನು ಸ್ಥಾಪಿಸಿಬೇಕು ಎಂದು ಅವರು ಒತ್ತಾಯಿಸಿದರು.
ಚನ್ನಗಿರಿ ಕಸಾಪದ ನಿಕಟಪೂರ್ವ ಅಧ್ಯಕ್ಷ ಎಂ.ಯು.ಚನ್ನಬಸಪ್ಪ ಮಾತನಾಡಿ, ಇಬ್ರಾಹಿಂ ಸುತಾರ್ ಮತ್ತು ಲತಾ ಮಂಗೇಶ್ಕರ್ ಇವರಿಬ್ಬರೂ ಭಾರತ ನೆಲದ ಶ್ರೇಷ್ಠ ವ್ಯಕ್ತಿಗಳಾಗಿ, ಮಾತೇ ಸಾಧನೆ ಆಗಬಾರದು ಸಾಧನೆ ಮಾತಾಗಬೇಕು ಎನ್ನುವಂತೆ ಬದುಕಿ ತೋರಿಸಿದವರು.ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕುವುದೇ ನಾವು ಅವರಿಗೆ ತೋರುವ ನಿಜವಾದ ಶ್ರದ್ಧಾಂಜಲಿ ಎಂದು ತಿಳಿಸಿದರು.
ಕಸಾಪದ ಪ್ರಮುಖರಾದ ಬಿ.ಇ.ಸಿದ್ದಪ್ಪ, ಜಿ.ಚಿನ್ನಸ್ವಾಮಿ, ಪಾಂಡೋಮಟ್ಟಿ ಟಿ.ವಿ.ಚಂದ್ರಣ್ಣ, ಹೊದಿಗೆರೆ ಪ್ರಭಾಕರ್, ರವಿಕುಮಾರ್ ಮತ್ತು ಓಂಕಾರಮೂರ್ತಿ ಮತ್ತಿತರು ಇದ್ದರು.