ದಾವಣಗೆರೆ, ಫೆ.3- ಕಡ್ಡಾಯ ಶಿಕ್ಷಣ, ಪರಿಸರ ಸಂರಕ್ಷಣೆ ಹಾಗೂ ಕನ್ನಡ ಶಾಲೆಗಳ ಉಳಿವಿನ ಸದುದ್ದೇಶವಿಟ್ಟುಕೊಂಡು ಸೈಕಲ್ ನಲ್ಲಿ ಸುಮಾರು 25 ಸಾವಿರ ಕಿ.ಮೀ.ವರೆಗೆ ಭಾರತ ದೇಶದ ಪರ್ಯಟನೆ ಕೈಗೊಂಡಿರುವ ಇಬ್ಬರು ಯುವ ಸ್ನೇಹಿತರು ಗಿನ್ನಿಸ್ ದಾಖಲೆ ಬರೆಯುವ ತವಕದಲ್ಲಿದ್ದಾರೆ.
ಬೆಂಗಳೂರಿನವರಾದ ಎಂ. ಧನುಷ್ ಹಾಗೂ ವೈ.ಬಿ. ಹೇಮಂತ್ ಇಬ್ಬರೂ ಒಟ್ಟಾಗಿ ಪ್ರತ್ಯೇಕ ಸೈಕಲ್ ಸವಾರಿಯಲ್ಲಿ ಆಂಧ್ರ, ತೆಲಂಗಾಣ, ಛತ್ತೀಸ್ ಘಡ್, ದಕ್ಷಿಣ ಮತ್ತು ಪಶ್ಚಿಮ ಭಾರತ, ಹಿಮಾಚಲ, ಜಮ್ಮು ಸೇರಿದಂತೆ 26 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ಭಾರತದಾದ್ಯಂತ ಸೈಕಲ್ ನಲ್ಲೇ ಪ್ರಯಾಣಿಸಿ ಕಡ್ಡಾಯ ಶಿಕ್ಷಣ, ಪರಿಸರ ಸಂರಕ್ಷಣೆ ಹಾಗೂ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ.
ಕಳೆದ ಜುಲೈ 11,2021ರಂದು ಬೆಂಗಳೂರಿನಿಂದ ಈ ಪ್ರಯಾಣ ಬೆಳೆಸಿರುವ ಸ್ನೇಹಿತರು ಇಂದು ನಗರಕ್ಕಾಗಮಿಸಿದ್ದರು. ಈಗಾಗಲೇ 20 ಸಾವಿರ ಕಿ.ಮೀ. ಕ್ರಮಿಸಿದ್ದು, ಬಾಕಿ ಇರುವ ಕೇರಳ ಮತ್ತು ತಮಿಳುನಾಡು ಭಾಗದಲ್ಲಿ ಸಂಚಾರ ಕೈಗೊಂಡು ಇನ್ನುಳಿದ ಕಿ.ಮೀ. ಅನ್ನು ಕ್ರಮಿಸಿ ಬರುವ ಮಾರ್ಚ್ 12 ಅಥವಾ 13ರಂದು ಪುನಃ ಬೆಂಗಳೂರಿನಲ್ಲಿ ತಮ್ಮ ಸೈಕಲ್ ಜಾಗೃತಿ ಸಮಾರೋಪಗೊಳಿಸಲಿದ್ದಾರೆ.
ಜಾಗೃತಿಗಾಗಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ
ನನಗೆ ಈ ಜಾಥಾಗೆ 8 ತಿಂಗಳ ಅವಕಾಶ ಸಿಗದ ಕಾರಣ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದೇನೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್, ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಬೇಕೆಂಬ ಗುರಿ ಇದೆ. ಈ ಜಾಥಾದ ಸಮಾರೋಪದ ದಿನ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸ್ವಾಗತಿಸಬೇಕೆಂಬ ಆಸೆ ಇದೆ. ಸೈಕಲ್ ಸವಾರಿ ಮುಖೇನ ತಾಳ್ಮೆ ಕಂಡುಕೊಳ್ಳಬಹುದು. ಮನಸ್ಸು ಹಾಗೂ ಹೃದಯ ಶಕ್ತಿಯುತವಾಗಲಿದೆ. ಹಾಗಾಗಿ ಸೈಕಲ್ ಸವಾರಿಯಿಂದ ನಮ್ಮ ಆರೋಗ್ಯ ವೃದ್ಧಿಸುವುದಲ್ಲದೇ ಸಮಾಜಕ್ಕೂ ಪೂರಕವಾಗಲಿದೆ.
– ಎಂ. ಧನುಷ್.
ಮನೆಗೆ ಒಂದು ಸೈಕಲ್ ಇರಲಿ
ಕಾಲೇಜಿನಲ್ಲಿ ಸಾಹಸ aಕ್ರೀಡೆಗಳನ್ನು ಆಡುತ್ತಿದ್ದೆವು. ನಾವೇನು ಸೈಕಲ್ ಸವಾರಿಯಲ್ಲಿ ಪರಿಣಿತಿ ಪಡೆದವರಲ್ಲ. ಸಮಾಜಕ್ಕೆ ಉತ್ತಮ ಸಂದೇಶ ಸಾರುವುದೇ ನಮ್ಮ ಸದಾಶಯ. ಬದುಕಿನ ಜಾನ ಬೆಳೆಯಲು ಪ್ರತಿಯೊಬ್ಬರೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಸಾಕ್ಷರತಾ ಭಾರತ ಮಾಡಬೇಕೆಂಬ ಹಂಬಲವಿದೆ. ಸೈಕಲ್ ಬಳಕೆಯಿಂದ ಸಂಚಾರ ಸಮಸ್ಯೆ, ಪರಿಸರ ಮಾಲಿನ್ಯ ತಡೆಯಬಹುದು. ದೆಹಲಿಯಲ್ಲಿ ಪರಿಸರ ಮಾಲಿನ್ಯವಾಗಿ ಅಲ್ಲಿನ ಜನರ ಜೀವನ ಸಂಕಷ್ಟಮಯವಾಗಿದೆ. ಇಂತಹ ಪರಿಸ್ಥಿತಿ ನಮ್ಮ ರಾಜ್ಯದಲ್ಲಿ ಬರಬಾರದೆಂದರೆ ಮನೆಗೆ ಒಂದು ಸೈಕಲ್ ಇರಲೇಬೇಕು.
– ವೈ.ಬಿ. ಹೇಮಂತ್.
ಉತ್ತರಾ ಖಂಡ್, ಗುಜರಾಜ್, ಮಧ್ಯಪ್ರದೇಶ ಗೋವಾ ಮುಖ್ಯಮಂತ್ರಿಗಳು ಹಾಗೂ ಓರ್ವ ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಸೈಕಲ್ ಜಾಗೃತಿ ಜಾಥಾದ ಸದುದ್ಧೇಶವನ್ನು ಹಂಚಿಕೊಂಡಿದ್ದೇವೆ. ಸುಮಾರು 230 ರೋಟರಿ ಕ್ಲಬ್ ಗಳು ಮತ್ತು ಯುವ ಸಮೂಹವನ್ನು ಭೇಟಿ ಮಾಡಲಾಗಿದೆ. ಪ್ರತಿ ದಿನ 120 ಕಿ.ಮೀ.ನಷ್ಟು ಕ್ರಮಿಸಲಾಗುವುದು. ಸೈಕಲ್ ಜಾಥಾ ಮುಖೇನ ಜನಜಾಗೃತಿ ಜೊತೆಗೆ ದೇಶದ ನಾನಾ ಭಾಗಗಳ ಸಂಸ್ಕೃತಿ, ಸಂಪ್ರದಾಯ, ಆಹಾರ ಪದ್ಧತಿಗಳ ಬಗ್ಗೆ ನಮಗೆ ತಿಳುವಳಿಕೆ ಮೂಡುತ್ತಿದೆ. ಅಲ್ಲದೇ, ದೇಹದ ತೂಕ ಇಳಿದಿದ್ದು, ಆರೋಗ್ಯ ವೃದ್ಧಿಯನ್ನೂ ಕಾಣುತ್ತಿದ್ದೇವೆ ಎನ್ನುತ್ತಾರೆ ಧನುಷ್ ಹಾಗೂ ಹೇಮಂತ್.
ಹಿಮಾಚಲದಲ್ಲಿ 7 ಡಿಗ್ರಿ, ಅಸ್ಸಾಂನಲ್ಲಿ 50 ಡಿಗ್ರಿ ವಾತಾವರಣದಲ್ಲಿ ಮತ್ತು ಮೂರು ದಿನ ಮಳೆಯಲ್ಲೂ ಸೈಕಲ್ ಸವಾರಿ ಮಾಡಿದ್ದೇವೆ. ಛತ್ತೀಸ್‌ಘಡದಲ್ಲಿ ನಕ್ಸಲ್ ಇರುವ ಪ್ರದೇಶದಲ್ಲಿ ಜಾಥಾ ಮಾಡಿದ್ದು, ಯಾವುದೇ ತೊಂದರೆಯಾಗಿಲ್ಲ. ನಾವು ಕರ್ನಾಟಕದ ಬಾವುಟ ಹಿಡಿದು ಸಾಗುತ್ತಿದ್ದೇವೆ. ನಮ್ಮ ಜಾಥಾಗೆ ಸಹಕಾರ, ಬೆಂಬಲ ಸಿಗುತ್ತಿದೆ ಎಂದು ಅವರು ಸುದ್ದಿಗಾರರೊಂದಿಗೆ ತಮ್ಮ ಅನುಭವ ಹಂಚಿಕೊಂಡರು.
ಈ ಇಬ್ಬರೂ ಬಿಕಾಂ ವ್ಯಾಸಂಗ ಮುಗಿಸಿದ್ದು, ಧನುಷ್ ಆರೋಗ್ಯ ಇಲಾಖೆಯ ನೌಕರರಾಗಿದ್ದರು. ಹೇಮಂತ್ ಸಾವಯವ ಕೃಷಿಕರು.
ದಾವಣಗೆರೆ ರೋಟರಿ ಕ್ಲಬ್ ಸ್ವಾಗತ: ನಗರಕ್ಕಾಗಮಿಸಿದ ಈ ಸ್ನೇಹಿತರನ್ನು ದಾವಣಗೆರೆ ರೋಟರಿ ಕ್ಲಬ್‌ನಿಂದ ಸ್ವಾಗತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕ್ಲಬ್‌ನ ದಕ್ಷಿಣದ ಅಧ್ಯಕ್ಷ ಡಾ. ಎಸ್.ಹೆಚ್. ಸುಜಿತ್ ಕುಮಾರ್, ಕಾರ್ಯದರ್ಶಿ ಪವನ್ ಪಡಗಲ್ ಸೇರಿದಂತೆ ಇತರರು ಇದ್ದರು.