ದಾವಣಗೆರೆ, ಫೆ.3- ಸಹಕಾರ ಸಂಘಗಳಿಗೆ ಸಂಬಂಧಪಟ್ಟಂತೆ ಎರಡು ತೆರಿಗೆಗಳನ್ನು ಇಳಿಕೆ ಮಾಡುವ ಬಗ್ಗೆ ಆಯ-ವ್ಯಯದಲ್ಲಿ ಘೋಷಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ದಾವಣಗೆರೆ – ಹರಿಹರ ಅರ್ಬನ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್ ಸ್ವಾಗತಿಸಿದ್ದಾರೆ.
ಸಹಕಾರಿ ಸಂಘಗಳು ಪಾವತಿಸಬೇಕಿದ್ದ ಪರ್ಯಾಯ ಕನಿಷ್ಠ ತೆರಿಗೆ (ಎಎಂಟಿ) ಅನ್ನು ಶೇ. 18.50 ರಿಂದ ಶೇ. 15ಕ್ಕೆ ಇಳಿಕೆ ಮಾಡುವುದಾಗಿ ಸರ್ಕಾರ ತಿಳಿಸಿದ್ದು, ಈ ಕ್ರಮದಿಂದಾಗಿ ಸಹಕಾರಿ ಸಂಘಗಳೂ ಸಹ ಖಾಸಗಿ ಕಂಪನಿಗಳಿಗೆ ಸಮಾನವಾಗಿ ಎಎಂಟಿ ಪಾವತಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
1 ರಿಂದ 10 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುವ ಸಹಕಾರ ಸಂಘಗಳಿಗೆ ವಿಧಿಸುವ ಸರ್‌ಚಾರ್ಜ್ ಅನ್ನು ಶೇ. 12 ರಿಂದ 7ಕ್ಕೆ ಇಳಿಕೆ ಮಾಡುವುದಾಗಿ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಘೋಷಿಸಿರುವುದು ಸ್ವಾಗತಾರ್ಹ ಎಂದಿರುವ ಮುರುಗೇಶ್, ಈ ಕ್ರಮದಿಂದ ಸಹಕಾರ ಸಂಘಗಳ ಆದಾಯ ವೃದ್ದಿಗೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಹಕಾರ ಸಂಘಗಳ ಬಹುತೇಕ ಸದಸ್ಯರು ರೈತರು ಮತ್ತು ಗ್ರಾಮೀಣ ಪ್ರದೇಶದವ ರಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಸಹಕಾರ ಸಂಘಗಳ ತೆರಿಗೆ ಮತ್ತು ಸರ್‌ಚಾರ್ಜ್ ಇಳಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿರುವುದನ್ನು ಪ್ರಸ್ತಾಪಿಸಿರುವ ಮುರುಗೇಶ್, ಸಹಕಾರಿ ಸಂಘಗಳಿಗೆ ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತಿರುವ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕಳೆದ ವರ್ಷ, ಸಹಕಾರಿ ಬ್ಯಾಂಕುಗಳ ಮೇಲಿರುವ ಆದಾಯ ತೆರಿಗೆ ಮಿತಿಯನ್ನು ಶೇ. 35 ರಿಂದ 22ಕ್ಕೆ ಇಳಿಸಲಾಗಿತ್ತು. ಅಲ್ಲದೇ, ಠೇವಣಿದಾರರ ರಕ್ಷಣೆಗಾಗಿ 1 ಲಕ್ಷ ರೂ.ಗಳ ಮಿತಿಯನ್ನು 5 ಲಕ್ಷ ರೂ.ಗಳಿಗೆ ಏರಿಸುವುದರೊಂದಿಗೆ ಠೇವಣಿದಾರರಿಗೆ ಭದ್ರತೆ ಒದಗಿಸಲಾಗಿತ್ತು. ಹೀಗೆ ಕೇಂದ್ರ ಸರ್ಕಾರವು ಸಹಕಾರಿ ಬ್ಯಾಂಕುಗಳಿಗೆ ಆರ್ಥಿಕ ನೆರವು ನೀಡುತ್ತಲೇ ಬಂದಿದೆ ಎಂದು ಮುರುಗೇಶ್ ತಿಳಿಸಿದ್ದಾರೆ.