ಮಡಿವಾಳ ಸಮುದಾಯವನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸಲು ಆಗ್ರಹ

ಪರಕೆಯಿಂದ ಮಲ ಮೂತ್ರಗಳನ್ನು ತೊಳೆಯುವವರು ಪರಿಶಿಷ್ಟ ಜಾತಿಯಲ್ಲಿದ್ದಾರೆ. ಅದೇ ಮಲ ಮೂತ್ರಗಳಿಂದ ಕೂಡಿದ ಬಟ್ಟೆಗಳನ್ನು ಕೈಯಿಂದ ತೊಳೆಯುವ ಮಡಿವಾಳರನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸಿಲ್ಲ. ಕಾರಣ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸುವುದು ನ್ಯಾಯೋಚಿತವಾಗಿದೆ. ಹೆರಿಗೆ – ಮುಟ್ಟು – ಸಾವು – ರೋಗ, ರುಜಿನು – ಕೀವು ರಕ್ತಸಿಕ್ತ ಮೈಲಿಗೆಯಂತಹ ಎಲ್ಲಾ ವರ್ಗದ ಬಟ್ಟೆಗಳನ್ನು ಕೈಯಿಂದ ತೊಳೆಯುತ್ತಾರೆ. ಆದರೂ ಗ್ರಾಮಾಂತರ ಪ್ರದೇಶದಲ್ಲಿ ಸಹ ಪಂಕ್ತಿ ಭೋಜನ, ಮನೆಗಳಲ್ಲಿ, ದೇವಸ್ಥಾನಗಳಲ್ಲಿ, ಬಾವಿ, ಕೆರೆಗಳಲ್ಲಿ, ಸಾಮಾಜಿಕ ಕಾರ್ಯಕ್ರಮಗಳಲ್ಲಿ, ಧಾರ್ಮಿಕ ಉತ್ಸವಾದಿಗಳಲ್ಲಿ, ಮಂಗಲ ಕಾರ್ಯಗಳಲ್ಲಿ ಮಡಿವಾಳರಿಗೆ ಅಸ್ಪೃಶ್ಯತೆ ಇದೆ.

-ಮಡಿವಾಳ ಸಮಾಜದ ಮುಖಂಡರು

ದಾವಣಗೆರೆ, ಫೆ.1- ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ, ನಗರದಲ್ಲಿ ಇಂದು ಜಿಲ್ಲಾ ಶ್ರೀ ಮಡಿವಾಳ ಮಾಚಿದೇವ ಸಂಘವು ರಾಜ್ಯ ಸರ್ಕಾರವನ್ನು ಒತ್ತಾಯಿಸಿತು.

ಶ್ರೀ ಮಡಿವಾಳ ಮಾಚಿದೇವ ಸಮುದಾಯ ಭವನದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸಂಘದ ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕದಲ್ಲಿ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು `ಕುಲ ಶಾಸ್ತ್ರೀಯ ಅಧ್ಯಯನ’ ನಡೆಸಿ, ವರದಿ ಸಲ್ಲಿಸಲು ಮೈಸೂರು ವಿಶ್ವವಿದ್ಯಾಲಯದ ಪ್ರೊ|| ಡಾ. ಅನ್ನಪೂರ್ಣಮ್ಮ ಅವರನ್ನು ನೇಮಕ ಮಾಡಲಾಗಿತ್ತು. ಅಂತೆಯೇ ಅವರು ತಮ್ಮ ವರದಿಯನ್ನು 2010ರಲ್ಲಿಯೇ ಸರ್ಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿ `ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು’ ಎಂಬುದಾಗಿ ಶಿಫಾರಸ್ಸು ಮಾಡಿದ್ದಾರೆ. ಸರ್ಕಾರಕ್ಕೆ ವರದಿ ಸಲ್ಲಿಸಿ 11 ವರ್ಷಗಳಾದರೂ ನಮ್ಮನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸದಿರುವುದು ವಿಷಾದನೀಯ ಎಂದರು.

ಮಡಿವಾಳ (ದೋಭಿ – ರಜಕ) ಜಾತಿಯನ್ನು ದೇಶದ 18 ರಾಜ್ಯಗಳಲ್ಲಿ ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಸೇರ್ಪಡೆ ಮಾಡಿದ್ದಾರೆ. ಒಂದು ಪ್ರದೇಶದಲ್ಲಿ ಪರಿಶಿಷ್ಟ ಜಾತಿಯಲ್ಲಿರುವವರು ದೇಶಾದ್ಯಂತ ಒಂದೇ ತೆರನಾಗಿ ಇರಬೇಕಾದುದು ಸಂವಿಧಾನಾತ್ಮಕವಾಗಿದೆ. ಕಾರಣ ನಮ್ಮದು ನ್ಯಾಯಯುತ ಬೇಡಿಕೆಯಾಗಿದೆ. ಅಲ್ಲದೇ ಸಾಮಾಜಿಕ ನ್ಯಾಯಪರವಾದದ್ದಾಗಿದೆ ಎಂದರು.

ದೇಶಾದ್ಯಂತ ಬಟ್ಟೆ ತೊಳೆಯುವ ಮಡಿವಾಳರು ಎಲ್ಲರೂ ಒಂದೇ ತೆರನಾಗಿದ್ದಾರೆ. ದೇಶದಲ್ಲಿ ರಾಜ್ಯವಾರು ಭಾಷೆಗಳ ಅನುಸಾರ ದೋಭಿ, ರಜಕ, ಅಗಸ, ಮಡಿವಾಳ, ಪರೀಟ, ಚಾಕಲ, ಮಣ್ಣನ್, ಸಾಕಲ, ವಣ್ಣನ್, ವೆಲ್ಲುತೇಡನ್, ಸಾಕಲವಾಡು ಎಂಬುದಾಗಿ ಕರೆಯುತ್ತಾರೆ. ಅಲ್ಲದೇ ಅಗಸ ಹಾಗೂ ದೋಬಿ ಅಸ್ಪೃಶ್ಯರು ಎಂದು ವಿದ್ವಾಂಸ ಅಪಾರಕನ ಸಮವರ್ತನೆ ಸ್ಮೃತಿಯಲ್ಲಿ ವಿವರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೇಲ್ಜಾತಿಯವರಿಗೆ ಇರುವಂತೆ ಸಾಮಾಜಿಕ ಗೌರವ ಬೆಂಬಲಗಳಿಲ್ಲದೇ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಇರುವ ಶಾಸನ – ಕಾನೂನು ಬದ್ಧ ಅವಕಾಶ – ಸೌಲಭ್ಯಗಳಿಲ್ಲದೇ ಉಭಯ ಸಂಕಟದ ಅಸಹಾಯಕ ಸ್ಥಿತಿಯಲ್ಲಿ ಮಡಿವಾಳ ಜನಾಂಗವಿದೆ. ಊರ ಹೊರಗಿದ್ದು ಅನುಭವಿಸುವ ಮಾನಸಿಕ ಕೀಳರಿಮೆಗಿಂತಲೂ ಊರ ಒಳಗಿರುವ ಅಸ್ಪೃಶ್ಯತೆ ಮಾನಸಿಕ ಯಾತನೆ ತೀವ್ರ ಹಾಗೂ ಅಪಮಾನದಿಂದ ಕೂಡಿದ್ದು, ಮಡಿವಾಳರು ಇದನ್ನು ಅನುಭವಿಸುತ್ತಿದ್ದಾರೆ ಎಂದು  ಮನವಿ ಪತ್ರದಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ.

ಈ ವೇಳೆ ಜಿಲ್ಲಾ ಸಂಘದ ಅಧ್ಯಕ್ಷ ಎಂ.ನಾಗೇಂದ್ರಪ್ಪ, ಕಾರ್ಯಾಧ್ಯಕ್ಷ ಹೆಚ್.ಜಿ.ಉಮೇಶ್ ಆವರಗೆರೆ, ಪ್ರಧಾನ ಕಾರ್ಯದರ್ಶಿ ಓಂಕಾರಪ್ಪ, ಖಜಾಂಚಿ ಎಂ.ಸುರೇಶ್ ಕೋಗುಂಡೆ, ಉಪಾಧ್ಯಕ್ಷರಾದ ಪಿ.ಮಂಜುನಾಥ್, ಜಿ.ವಿಜಯಕುಮಾರ್, ಡೈಮಂಡ್ ಮಂಜುನಾಥ್, ಸಹಕಾರ್ಯದರ್ಶಿ ಆರ್.ಎನ್.ಧನಂಜಯ, ತಾಂತ್ರಿಕ ಸಲಹೆಗಾರ ಎಂ.ನಾಗರಾಜ್, ಮಾಧ್ಯಮ ಸಲಹೆಗಾರ ಎಂ.ವೈ.ಸತೀಶ್, ಸಂಘಟನಾ ಕಾರ್ಯದರ್ಶಿಗಳಾದ ಅಂಜಿನಪ್ಪ ಪೂಜಾರ್, ಬಿ.ಅಜಯ್, ಸಂಚಾಲಕರಾದ ಎಂ.ರುದ್ರೇಶ್ ನಿರ್ದೇಶಕರಾದ ರವಿ ಚಿಕ್ಕಣ್ಣ, ಪರಶುರಾಮ್, ಎಂ.ಎನ್.ಹುಚ್ಚಪ್ಪ, ಫಕ್ಕೀರಸ್ವಾಮಿ, ಎಂ.ಸುಭಾಷ್, ನಾಗಮ್ಮ, ಎಂ.ರವಿ ಸೇರಿದಂತೆ ಇತರರು ಇದ್ದರು.

error: Content is protected !!