ಹರಪನಹಳ್ಳಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ರೇಣುಕಾದೇವಿ
ಹರಪನಹಳ್ಳಿ,ಫೆ.2- ತಾಲ್ಲೂಕಿನಲ್ಲಿ ಕೆಲವೊಂದು ಹಾಸ್ಟೆಲ್ಗಳನ್ನು ಮಾದರಿ ಹಾಸ್ಟೆಲ್ಗಳನ್ನಾಗಿ ಅಭಿ ವೃದ್ಧಿಪಡಿಸಲು ಶೀಘ್ರ ಪ್ರಸ್ತಾವನೆ ಕಳಿಸಿಕೊಡಲಾಗು ವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ರೇಣುಕಾದೇವಿ ತಿಳಿಸಿದ್ದಾರೆ.
ಅವರು ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಲಾಖೆಯ ಉಪನಿರ್ದೇಶಕರು ಜಿಲ್ಲೆಯಲ್ಲಿ ಕೆಲವೊಂದನ್ನು ಮಾದರಿ ಹಾಸ್ಟೆಲ್ ಗಳನ್ನಾಗಿ ಪರಿವರ್ತಿಸುವ ಪರಿಕಲ್ಪನೆ ಹೊಂದಿದ್ದು, ಈ ಕುರಿತು ಪ್ರಸ್ತಾವನೆ ಕಳಿಸಿಕೊಡಲಾಗುವುದು ಎಂದರು.
ತಾಲ್ಲೂಕಿನಲ್ಲಿ ಕೆಲವೊಂದು ಹಾಸ್ಟೆಲ್ ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿಲ್ಲ, ತ್ವರಿತವಾಗಿ ಪೂರ್ಣಗೊಳಿಸಿ ನಮಗೆ ಹಸ್ತಾಂತರ ಮಾಡುವ ಕುರಿತು ಸಂಬಂಧಪಟ್ಟವರ ಜೊತೆ ಚರ್ಚಿಸಿರುವೆ ಎಂದು ಹೇಳಿದರು.
ಹಾಸ್ಟೆಲ್ ಗಳಿಗೆ ಹೆಚ್ಚುವರಿ ಕೊಠಡಿ ಹಾಗೂ ಹೆಚ್ಚುವರಿ ಶೌಚಾಲಯಗಳ ನಿರ್ಮಾಣಕ್ಕೆ ಸಹ ಪ್ರಸ್ತಾವನೆ ಸಲ್ಲಿಸಲಾಗುವುದು, ಸ್ಕಾಲರ್ ಶಿಪ್ ಪಡೆಯುವ ಕುರಿತು ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ಕೊಡುತ್ತೇವೆ ಎಂದರು.ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಹರಪನಹಳ್ಳಿ ತಾಲೂಕಿನಲ್ಲಿ ಉತ್ತಮ ಕೆಲಸ ನಿರ್ವಹಿಸಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು.