ಜಾತೀಯತೆ ಹೋಗಲಾಡಿಸಿ ನಾವೆಲ್ಲಾ ಒಂದು ಎನ್ನುವ ಸಂಕಲ್ಪ ಮಾಡಬೇಕಾಗಿದೆ: ಬೀಳಗಿ

ಜಿಲ್ಲಾಡಳಿತ ಭವನದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಣೆ

ದಾವಣಗೆರೆ, ಫೆ. 1- ಕಾಯಕಕ್ಕೊಂದು ಜಾತಿಯನ್ನು ಸೀಮಿತ ಮಾಡಲಾಗಿದ್ದು ಅದನ್ನು ಹೋಗಲಾಡಿಸಲೆಂದೇ ಅಂದಿನ ಶರಣರು ಹೋರಾಟ ಮಾಡಿದರು.  ಜಾತೀಯತೆಯನ್ನು ಹೋಗಲಾಡಿಸಿ, ನಾವೆಲ್ಲರೂ ಒಂದು ಎನ್ನುವ ಸಂಕಲ್ಪವನ್ನು ಮಡಿವಾಳ ಮಾಚಿದೇವರ ಜಯಂತಿಯಂದು ನಾವೆಲ್ಲರೂ ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಭಿಪ್ರಾಯಪಟ್ಟರು

ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವರ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಜಾತಿಗೆ ಸೀಮಿತರಾಗದೆ ಎಲ್ಲರೊಂದಿಗೂ ಬೆರೆತು ನಾವು ಎಲ್ಲಾ ಕೆಲಸಗಳನ್ನು ಮಾಡಬೇಕಾಗಿದೆ. ನಮ್ಮ ನಮ್ಮಗಳ ಕಾಯಕದ ಆಧಾರದ ಮೇಲೆ ನಮ್ಮ ನಮ್ಮ ಜಾತಿಗಳನ್ನು ಸೀಮಿತಗೊಳಿಸಲಾಗಿದ್ದು, ಇದರಿಂದ ಎಲ್ಲರೂ ಹೊರ ಬರಬೇಕಾಗಿದೆ. ಅಲ್ಲದೆ ಅಂದು ಶರಣರು ಮಾಡಿದ ಕಲ್ಯಾಣ ಕ್ರಾಂತಿಯ ಬಗ್ಗೆ ನಾವೆಲ್ಲ ಅರಿತು ಅವರಂತೆ ಸಾಗಬೇಕಾಗಿದೆ ಎಂದು ಕರೆ ನೀಡಿದರು.

ನಾನು ಈ ಹಿಂದೆ ಬಸವ ಕಲ್ಯಾಣದಲ್ಲಿ ಚುನಾವಣಾ ವೀಕ್ಷಕರಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಮಾಚಿದೇವರ ಗವಿಯನ್ನು ವೀಕ್ಷಿಸಿದೆ. ನಿಜಕ್ಕೂ ರೋಮಾಂಚನ ಆಯಿತು. ಅಷ್ಟೇ ಅಲ್ಲ ಅವರು ಬದುಕಿದ ರೀತಿಯನ್ನು ತಿಳಿದು ಆಶ್ಚರ್ಯವಾಯಿತು. ಅಂದಿನ ಕಲ್ಯಾಣ ಕ್ರಾಂತಿಯ ಕುಡಿಗಳೇ ಈಗ ದೇಶದಲ್ಲಿ ವಿಶ್ವದಲ್ಲಿ ರಾಜ್ಯದಲ್ಲಿ ಎಲ್ಲೆಡೆ ಪಸರಿಸಿದ್ದು ಇಂದು ನಾವುಗಳು ಈ ರೀತಿ ಬದುಕಲು ನಮಗೆ ಅನುಕೂಲವಾಗಿದೆ ಎಂದು ಹೇಳಿದರು.

ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಆವರಗೆರೆ ಎಚ್.ಜಿ .ಉಮೇಶ್ ಮಾತನಾಡಿ, ತನಗಾಗಿ ಎನ್ನದೇ  ಇತರರಿಗಾಗಿ ಎಂದು ಕೆಲಸ ಮಾಡಿದಾಗ ಮಾತ್ರ ಸಮಾಜ ಉದ್ಧಾರ ಆಗುತ್ತದೆ. ಮಡಿವಾಳ ಮಾಚಿದೇವರಂತೆ ನಾವೆಲ್ಲರೂ ಶ್ರದ್ಧಾಭಕ್ತಿಯಿಂದ ಶರಣರ ಚಿಂತನೆಗಳನ್ನು ಮೈಗೂಡಿಸಿಕೊಂಡು ಬದುಕಬೇಕಾಗಿದೆ. ಅಂದು ವಚನ ಸಾಹಿತ್ಯಗಳನ್ನು ನಾಶ ಮಾಡಲು ಬಂದ ದುಷ್ಟರನ್ನು ಹಿಮ್ಮೆಟ್ಟಿಸಿ ಇಡೀ ವಚನ ಸಾಹಿತ್ಯಗಳನ್ನು ರಕ್ಷಿಸಿದಂತಹ ಮಹಾನ್ ವ್ಯಕ್ತಿ ಮಡಿವಾಳ ಮಾಚಿದೇವರ ಕುಲದಲ್ಲಿ  ಹುಟ್ಟಿದವರು ನಾವು‌. ಆ ಬಗ್ಗೆ ಹೆಮ್ಮೆ ಪಡಬೇಕಾಗಿದೆ. ಅದರಂತೆ ನಾವೂ ಕೂಡ ಸರ್ವರೊಂದಿಗೂ ಬರೆದು ಸಮಾಜದ ಹೊರಗಿನ ಕೊಳೆ ತೊಳೆಯುವ ಜೊತೆಗೆ ಆಂತರಿಕ ಕೊಳಕನ್ನು ತೊಳೆಯಲು ಮುಂದಾಗಬೇಕಿದೆ ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಬಿ. ಆನಂದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ರೇಷ್ಮಾ ಕೌಸರ್, ಮಡಿವಾಳ ಸಮಾಜದ ಜಿಲ್ಲಾ ಅಧ್ಯಕ್ಷ ಎಂ. ನಾಗೇಂದ್ರಪ್ಪ, ಓಂಕಾರಪ್ಪ, ಪತ್ರಕರ್ತ ಎಂ.ವೈ. ಸತೀಶ್, ನಾಗಮ್ಮ ಪಿ. ಮಂಜುನಾಥ್, ಯರಬಳ್ಳಿ ಉಮಾಪತಿ, ಕಿಶೋರ್ ಕುಮಾರ್, ರವಿ ಚಿಕ್ಕಣ್ಣ, ಎಂ.ಆರ್. ಧನಂಜಯ್, ಯೋಗಪಟು ಪರಶುರಾಮ್, ಜಿ. ಅಜಯ ಕುಮಾರ್, ಪೂಜಾರ್ ಅಂಜಿನಪ್ಪ, ಫಕ್ಕೀರಪ್ಪ, ರವಿಕುಮಾರ್, ಎಂ ರಾಜು ಉಪಸ್ಥಿತರಿದ್ದರು.

error: Content is protected !!