ವಚನಗಳಿಂದ ಸಮಾಜ ತಿದ್ದಿದ ಮಾಚಿದೇವರು

ದೇಶದ 18 ರಾಜ್ಯಗಳಲ್ಲಿ ಈ ಮಡಿವಾಳ ಸಮಾಜವು ಪ.ಜಾತಿಗೆ ಸೇರ್ಪಡೆಗೊಂಡಿದ್ದು, ಕರ್ನಾಟಕದಲ್ಲೂ ಪ.ಜಾ.ಗಾಗಿ ಮೀಸಲಿಗೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶೀಘ್ರವೇ ಶಿಫಾರಸ್ಸು ಮಾಡಬೇಕು.

– ಕುಮಾರ್ ಮಡಿವಾಳರ, ನ್ಯಾಯವಾದಿ, ರಾಣೇಬೆನ್ನೂರು

ರಾಣೇಬೆನ್ನೂರು, ಫೆ.1- ಕಾಯಕ ಯೋಗಿ ಮಡಿವಾಳ ಮಾಚಿದೇವರ ಕೊಡುಗೆ ಮಡಿವಾಳ ಸಮಾಜಕ್ಕೆ ಅಪಾರವಾಗಿದ್ದು, ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಿ ಮಾಚಿದೇವರು ಅಮರರಾಗಿದ್ದಾರೆ. ಕಾಯಕಕ್ಕೆ ಇನ್ನೊಂದು ಹೆಸರೇ ಮಾಚಿದೇವರಾಗಿದ್ದರು. ಅಂತಹ ಶರಣರ ಆದರ್ಶಗಳನ್ನು ಸರ್ವರೂ ಜೀವನದಲ್ಲಿ ರೂಢಿಸಿಕೊಂಡು ಮುನ್ನಡೆಯಬೇಕು ಎಂದು ಯುವ ನ್ಯಾಯವಾದಿ ಕುಮಾರ್ ಮಡಿವಾಳರ ಹೇಳಿದರು. 

ಮಂಗಳವಾರ ನಗರದ  ಮಿನಿ ವಿಧಾನಸೌಧದ ಸಭಾಂಗಣದಲ್ಲಿ ವಿವಿಧ ಮಡಿವಾಳ ಸಂಘಗಳ ನೇತೃತ್ವದಲ್ಲಿ ಏರ್ಪಾಡಾಗಿದ್ದ ಕಾಯಕ ಯೋಗಿ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಭಕ್ತಿಯಿಂದ ಸಾಮಾಜಿಕ ಸುವ್ಯವಸ್ಥೆ, ಧಾರ್ಮಿಕ, ಶರಣ ಸಂಸ್ಕೃತಿಯ ಮೂಲಕ ಮರೆಯ ಲಾರದಂತಹ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ ಜಿ.ಎಸ್. ಶಂಕರ್ ಮಾತನಾಡಿ, ಮಡಿವಾಳ ಸಮಾಜದವರು ಕೇವಲ ಬಟ್ಟೆಗಳನ್ನು ಮಡಿ ಮಾಡಿ ಶುದ್ಧಿಗೊಳಿಸುವುದಷ್ಟೇ ಅಲ್ಲ, ಮನಸುಗಳನ್ನೂ ಮಡಿ ಮಾಡಿ ಶುದ್ಧ ಮಾಡುವ ಪ್ರಾಮಾಣಿಕ ಕಾಯಕ ಈ ಜನಾಂಗ ಮಾಡುತ್ತಿದೆ. ಜನಾಂಗದವರು ಎಲ್ಲ ಹಂತಗಳಲ್ಲೂ ಮುಂದೆ ಬರಬೇಕಾದರೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು  ಎಂದು ಕರೆ ನೀಡಿದರು.

ಸಮಾಜದ ಮುಖಂಡರುಗಳಾದ ಚಂದ್ರಣ್ಣ ಚಳಗೇರಿ, ವೀರಣ್ಣ ದೊಡ್ಡಮನಿ, ಡಿಳ್ಳೆಪ್ಪ ಮಡಿವಾಳರ, ಹನುಮಂತಪ್ಪ ಮಡಿವಾಳರ, ಅಶೋಕ ಮಡಿವಾಳರ, ರಾಜು ಮಡಿವಾಳರ, ಹಾದಿಮನಿ, ಎಂ.ಚಿರಂಜೀವಿ, ಮಾಲತೇಶ ಮಡಿವಾಳರ, ಗುಡ್ಡಪ್ಪ ಮಡಿವಾಳರ, ಮಧು ಮಡಿವಾಳರ, ಅನಿಲ್ ಮಡಿವಾಳರ, ಮಾಲತೇಶ ನೆಸ್ವಿ, ನಾಗಪ್ಪ ಮಡಿವಾಳರ, ಮಹೇಶ ಮಡಿವಾಳರ ಸೇರಿದಂತೆ ಸಮಾಜ ಬಾಂಧವರು ಕಛೇರಿಯ ಸಿಬ್ಬಂದಿಗಳು ಮತ್ತಿತರರು ಇದ್ದರು.

error: Content is protected !!