ಧಾರ್ಮಿಕ ಸಂಪ್ರದಾಯ ಹತ್ತಿಕ್ಕುವ ಸರ್ಕಾರದ ಕ್ರಮಕ್ಕೆ ಶ್ರೀರಾಮ ಸೇನೆ ಖಂಡನೆ

ದಾವಣಗೆರೆ, ಫೆ.1- ಕೋವಿಡ್ ನೆಪದಲ್ಲಿ ಜಾತ್ರೆ, ಉತ್ಸವ ಸೇರಿದಂತೆ ಈ ನಾಡಿನ ಸಂಪ್ರದಾಯಗಳನ್ನು ಹತ್ತಿಕ್ಕುವ ರಾಜ್ಯ ಸರ್ಕಾರದ ಕ್ರಮವನ್ನು ಶ್ರೀರಾಮ ಸೇನೆ ಖಂಡಿಸುತ್ತದೆ ಎಂದು ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಹುತೇಕ ಕೋವಿಡ್  ನಿಯಮಗಳನ್ನು ವಾಪಾಸ್ ಪಡೆಯಲಾಗಿದೆ. ಆದರೆ ಜಾತ್ರೆ, ಉತ್ಸವ ಸೇರಿದಂತೆ, ಧಾರ್ಮಿಕ ಆಚರಣೆಗಳಿಗೆ ಮಾತ್ರ ನಿರ್ಬಂಧ ಹೇರಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.

ಮಕರ ಸಂಕ್ರಾಂತಿ ನಂತರವೇ ಈ ನಾಡಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ರಥೋತ್ಸವ, ಜಾತ್ರೆ, ಉತ್ಸವಗಳು ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿವೆ. ಆದರೆ ಸರ್ಕಾರ ಹಿಂದೂ ಸಂಪ್ರದಾಯದಂತೆ ನಡೆಯುವ ಧಾರ್ಮಿಕ ಆಚರಣೆಗಳ ಮೇಲೆ ಸವಾರಿ ಮಾಡುತ್ತಿರುವುದು ಖಂಡನೀಯ ಎಂದರು.

ಜಾತ್ರೆ, ಉತ್ಸವಗಳು ಕೇವಲ ಆಚರಣೆ ಮಾತ್ರವಲ್ಲ. ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ, ವ್ಯಾಪಾರಸ್ಥರಿಗೆ, ಕಲಾವಿದರುಗಳ ಹೊಟ್ಟೆಪಾಡಿನ ವಿಚಾರವಾಗಿದೆ. ಮಹಿಳೆಯರು ಸೇರಿದಂತೆ ಅನೇಕರು ವ್ಯಾಪಾರವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಇವರಿಗೆ ನಿರ್ಬಂಧ ಹೇರಿದರೆ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದರು.

ನಿರ್ಬಂಧ ಹಿಂಪಡೆಯದಿದ್ದರೆ ಇದೇ ದಿನಾಂಕ 4 ರಂದು ವ್ಯಾಪಾರಸ್ಥರು, ಭಕ್ತರು, ಸಾರ್ವಜನಿಕರ ಸಹಕಾರದೊಂದಿಗೆ ಶ್ರೀರಾಮ ಸೇನೆ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಜ್ಞಾನ ಮಂದಿರಗಳಲ್ಲಿ ಕೋಮುವಾದವನ್ನು ಬಿತ್ತುತ್ತಿರುವುದನ್ನು ಶ್ರೀರಾಮ ಸೇನೆ ಉಗ್ರವಾಗಿ ಖಂಡಿಸುತ್ತದೆ. ಹಿಜಾಬ್ ಪ್ರಕರಣಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಕರಾವಳಿ ಭಾಗದಲ್ಲಿ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ವ್ಯಾಪಕವಾಗಿ ಬೆಳೆಯುತ್ತಿರುವುದಕ್ಕೆ ಈ ಸ್ಥಿತಿ ಕಾರಣವಾಗಿದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಮಣಿ ಸರ್ಕಾರ್, ಪರಶುರಾಮ್ ನಡುಮನಿ, ಆಲೂರು ರಾಜಶೇಖರ್, ರಾಹುಲ್ ಬೊಮ್ಮ, ರಾಜು, ಶ್ರೀಧರ್ ಉಪಸ್ಥಿತರಿದ್ದರು.

error: Content is protected !!