ತಾ. ಆಸ್ಪತ್ರೆಗಳಿಗೆ ಪೊಲೀಸ್ ಭದ್ರತೆ

ತಾ. ಆಸ್ಪತ್ರೆಗಳಿಗೆ ಪೊಲೀಸ್ ಭದ್ರತೆ - Janathavaniಇಲಾಖಾ ತನಿಖೆಯೇ ಅಂತಿಮವಲ್ಲ

ಜಗಳೂರಿನ 13 ಪಿ.ಡಿ.ಒ.ಗಳ ಮೇಲೆ ಎಫ್.ಐ.ಆರ್. ದಾಖಲಿಸಲಾಗಿದೆ. ಆದರೆ, ಇಲಾಖಾ ತನಿಖೆಯಲ್ಲಿ ಬಿ – ರಿಪೋರ್ಟ್ ಬಂದಿರುವುದರಿಂದ ಅವರ ವಿರುದ್ಧದ ಕ್ರಮ ಕೈ ಬಿಡಬೇಕು ಎಂದು ಜಗಳೂರು ನೌಕರರ ಸಂಘದ ಅಧ್ಯಕ್ಷ ಎನ್.ಸಿ. ಅಜ್ಜಯ್ಯ ಮನವಿ ಮಾಡಿಕೊಂ ಡರು. ಆದರೆ, ಇಲಾಖಾ ತನಿಖೆ ತೃಪ್ತಿಕರವಾಗಿಲ್ಲ. ಮರು ವಿಚಾರಣೆಗೆ ಆದೇಶಿಸಲಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್ ತಿಳಿಸಿದರು. ಆಗ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ನೌಕರರಿಗೆ ಅನ್ಯಾಯ ಆಗಲು ಬಿಡುವು ದಿಲ್ಲ. ಸರ್ಕಾರಕ್ಕೆ ಅನ್ಯಾಯ ಮಾಡಿದ ನೌಕರರನ್ನೂ ಬಿಡುವುದಿಲ್ಲ. ಈ ಬಗ್ಗೆ ಪಾರದರ್ಶಕ ಹಾಗೂ ನ್ಯಾಯಯುತ ತನಿಖೆ ನಡೆಲಾಗುವುದು ಎಂದರು.

ನನ್ನ ಪ್ರವಾಸ ಭತ್ಯೆಯೂ ವರ್ಷಗಟ್ಟಲೆ ವಿಳಂಬ : ಡಿ.ಸಿ

ಹೊನ್ನಾಳಿ ತಾಲ್ಲೂಕು ಆರೋಗ್ಯ ಇಲಾಖೆಯ ನೌಕರರಿಗೆ ಸರಿಯಾದ ಸಮಯಕ್ಕೆ ಪ್ರವಾಸ ಭತ್ಯೆ ಪಾವತಿ ಮಾಡ ಬೇಕು ಎಂದು ಹೊನ್ನಾಳಿ ತಾಲ್ಲೂಕಿನ ನೌಕರರ ಸಂಘದ ಅಧ್ಯಕ್ಷ ಕುಮಾರ್ ಮನವಿ ಮಾಡಿಕೊಂಡರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸರ್ಕಾರದಿಂದ ಪ್ರವಾಸ ಭತ್ಯೆ ಬರುವುದು ಕಡಿಮೆ ಹಾಗೂ ತಡವಾಗಿ ಬರುತ್ತದೆ. ನನ್ನ ಪ್ರವಾಸ ಭತ್ಯೆಯೂ ಮೂರು ವರ್ಷ ತಡವಾಗಿ ಬಂದಿದೆ ಎಂದು ಹೇಳಿದರು.

ದಾವಣಗೆರೆ, ಜ.31 – ಜಿಲ್ಲೆಯ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೆ 24*7 ಪೊಲೀಸ್ ಭದ್ರತೆ ಒದಗಿಸಲು, ವೇತನ ಬಾಕಿ ಬಿಡುಗಡೆ ಹಾಗೂ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪತ್ರ ಬರೆಯಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚಿಸಿದ್ದಾರೆ.

ತಮ್ಮ ಕಛೇರಿ ಸಭಾಂಗಣದಲ್ಲಿ ಇಂದು ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕುಂದು – ಕೊರತೆಗಳ ಜಂಟಿ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸಭೆಯಲ್ಲಿ ಮಾತನಾಡಿದ ಪದಾಧಿಕಾರಿಗಳು, ತಾಲ್ಲೂಕು ಆಸ್ಪತ್ರೆಗಳಲ್ಲಿ ಸಿಬ್ಬಂದಿಗೆ ಸಾರ್ವಜನಿಕರಿಂದ ಕಿರುಕುಳ ಎದುರಾಗುತ್ತಿದೆ. ಚನ್ನಗಿರಿ ತಾಲ್ಲೂಕು ಆಸ್ಪತ್ರೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಫ್.ಐ.ಆರ್. ದಾಖಲಿಸಲಾಗಿದೆ ಎಂದರು. 

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಬೀಳಗಿ, ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ  24×7 ಪೊಲೀಸ್ ವ್ಯವಸ್ಥೆ ಮಾಡಬೇಕು ಎಂದು ಸಭೆಯಲ್ಲಿದ್ದ ಎ.ಎಸ್.ಪಿ. ರಾಮಗೊಂಡ ಬಸರಗಿ ಅವರಿಗೆ ತಿಳಿಸಿದರು.

ಸರ್ಕಾರಿ ನೌಕರರು, ಅದರಲ್ಲೂ ಶಿಕ್ಷಕರಿಗೆ ವೈದ್ಯಕೀಯ ವೆಚ್ಚದ ಹಣ ಮರುಪಾವತಿಯಾಗುತ್ತಿಲ್ಲ. ತಾಲ್ಲೂಕು ಪಂಚಾಯ್ತಿಗಳಲ್ಲಿ ಅರ್ಜಿಗಳು ಬಾಕಿ ಇವೆ. ಪ್ರತಿ ತಾಲ್ಲೂಕಿನಲ್ಲೂ 60 ಲಕ್ಷ  ರೂ.ಗಳಿಗೂ ಹೆಚ್ಚು ಬಾಕಿ ಇದೆ ಎಂದು ಪದಾಧಿಕಾರಿಗಳು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ಮಾತನಾಡಿ, ಕೊರೊನಾ ಕರ್ತವ್ಯ ನಿರ್ವಹಿಸುವ ಮೃತಪಟ್ಟಿರುವ ಶಿಕ್ಷಕರು ಹಾಗೂ ಬಿ.ಎಲ್.ಒ.ಗಳಿಗೆ ಇನ್ನೂ ಸರ್ಕಾರದಿಂದ ನೆರವು ಬಿಡುಗಡೆಯಾಗಿಲ್ಲ ಎಂದು ಹೇಳಿದರು.

ಚನ್ನಗಿರಿ ನೌಕರರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ತ್ಯಾವಣಿಗೆ, ನಲ್ಲೂರು, ಗೋಪೇನಹಳ್ಳಿ, ತಾವರಕೆರೆ, ಜಿ.ಕೆ. ಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಕಾರ್ಯ ನಿರ್ವಹಿಸುತ್ತಿರುವ ಕೆಲಸಗಾರರಿಗೆ ಕಳೆದ ಸೆಪ್ಟೆಂಬರ್‌ನಿಂದಲೂ ವೇತನ ಬಿಡುಗಡೆಯಾಗಿಲ್ಲ ಎಂದರು.

ಹರಿಹರ ತಾಲ್ಲೂಕಿನ ನೌಕರರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ ಮಾತನಾಡಿ, ಆರೋಗ್ಯ ಇಲಾಖೆಯ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ಮಂಜೂರು ಆಗುತ್ತಿಲ್ಲ ಈ ಕುರಿತು ಗಮನ ಹರಿಸಲು ಮನವಿ ಮಾಡಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ಮಾತನಾಡಿ, ದಾವಣಗೆರೆ ಜಿಲ್ಲೆಯಾಗಿ 25 ವರ್ಷ ತುಂಬಿದೆ ಹಾಗಾಗಿ ರಜತ ಮಹೋತ್ಸವ ಕಟ್ಟಡ ನಿರ್ಮಿಸಲು ಸರ್ಕಾರಿ ನೌಕರರ ಸಂಘಕ್ಕೆ 2 ಎಕರೆ ಜಮೀನು ಮಂಜೂರು ಮಾಡಿಕೊಡಬೇಕು ಎಂದು ಕೋರಿದರು.

ಈ ವೇಳೆ ಎಸ್.ಎಸ್.ಎಲ್.ಸಿ ಸಮಾಜ ವಿಜ್ಞಾನ ಕಲಿಕಾ ಮಾರ್ಗದರ್ಶಿಯನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯತ್ ಸಿಇಓ ಡಾ.ವಿಜಯ ಮಹಾಂತೇಶ್ ದಾನಮ್ಮನವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ ಬಿಡುಗಡೆ ಮಾಡಿದರು.

ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್, ಹೊನ್ನಾಳಿ ನೌಕರರ ಸಂಘದ ಅಧ್ಯಕ್ಷ ಕುಮಾರ್, ನ್ಯಾಮತಿ ತಾಲ್ಲೂಕು ಸಂಘದ ಅಧ್ಯಕ್ಷ ನಾಗರಾಜು ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!