ವಾಲ್ಮೀಕಿ ಜಾತ್ರೆ ಮುಂದೂಡಿಕೆ

ಮಲೇಬೆನ್ನೂರು, ಜ.31- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆಬ್ರವರಿ 8 ಮತ್ತು 9 ರಂದು ಹಮ್ಮಿಕೊಂಡಿದ್ದ 4ನೇ ವರ್ಷದ ವಾಲ್ಮೀಕಿ ಜಾತ್ರೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದ್ದಾರೆ.

ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ  ಇಂದು ಕರೆದಿದ್ದ ಮಠದ ಧರ್ಮದರ್ಶಿಗಳ ಸಮಾಜದ ಜಿಲ್ಲಾಧ್ಯ ಕ್ಷರ, ಮುಖಂಡರ ಹಾಗೂ ಶಾಸಕರ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಕೋವಿಡ್ ಕಾರಣ ದಿಂದಾಗಿ ಸರ್ಕಾರದ ಮಾರ್ಗಸೂಚಿಯಂತೆ ಈಗಾಗಲೇ ತರಳಬಾಳು ಹುಣ್ಣಿಮೆ, ಹರಜಾತ್ರೆ, ಸೇವಾಲಾಲ್ ಜಾತ್ರೆಯನ್ನು ಮುಂದೂಡಲಾಗಿದೆ. ನಾವೂ ಕೂಡಾ ಜನರ ಆರೋಗ್ಯದ ಹಿತದೃಷ್ಟಿ ಮತ್ತು ಸರ್ಕಾರ – ಜಿಲ್ಲಾಡಳಿತದ ಮನವಿ ಹಿನ್ನೆಲೆಯಲ್ಲಿ ವಾಲ್ಮೀಕಿ ಜಾತ್ರೆಯನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಶ್ರೀಗಳು ಹೇಳಿದರು.

ಫೆಬ್ರವರಿ 9 ರಂದು ಸಾಂಪ್ರದಾಯಿಕವಾಗಿ ಮಠದಲ್ಲಿ ಅತ್ಯಂತ ಸರಳವಾಗಿ ವಾಲ್ಮೀಕಿ ರಥದ ಪೂಜೆ ನೆರವೇರಿಸಿ, ಸಭೆ ನಡೆಸಲಾಗುವುದು. ಸಭೆಯಲ್ಲಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಹೋರಾಟ ಮಾಡುವ ಐತಿಹಾಸಿಕ ನಿರ್ಣಯ ತೆಗೆದು ಕೊಳ್ಳುವುದಾಗಿ ಸ್ವಾಮೀಜಿ ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ಮದಕರಿ ನಾಯಕ ಥೀಮ್ ಪಾರ್ಕ್ ಮಾಡುತ್ತೇವೆ ಎಂದು ಹೇಳಿ ಸಮಾಜದ ಮತಗಳನ್ನು ಪಡೆದು, ಬಿಜೆಪಿ ಈಗ ಮಾತು ಮರೆತಿದೆ. ಎಸ್ಟಿ ಅಭಿವೃದ್ಧಿ ನಿಗಮಕ್ಕೆ 550 ಕೋಟಿ ಅನುದಾನ ಬಿಡುಗಡೆ ಎಂದು ಹೇಳಿ 50 ಕೋಟಿ ಮಾತ್ರ ಕೊಟ್ಟಿದ್ದಾರೆ.

ಬ್ಯಾಕ್‌ಲಾಗ್ ಹುದ್ದೆ ಭರ್ತಿ ಮಾಡಿಲ್ಲ. ಸಿಂಧೂರು ಲಕ್ಷ್ಮಣ ಪ್ರಾಧಿಕಾರ ರಚಿಸಿಲ್ಲ. ರಾಜ್ಯದ ಯಾವುದಾದರೊಂದು ವಿಶ್ವವಿದ್ಯಾನಿಲಯಕ್ಕೆ ವಾಲ್ಮೀಕಿ ಹೆಸರು ನಾಮಕರಣ ಮಾಡುವಂತೆ ಬಹಳಷ್ಟು ಬಾರಿ ಮನವಿ ಮಾಡಿದ್ದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವಂತೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ವರದಿ ಸಲ್ಲಿಸಿದ್ದರೂ ಸರ್ಕಾರ ಮಾತ್ರ ಉಪಸಮಿತಿ ರಚನೆ ಮಾಡಿ, ನಂತರ ಉನ್ನತ ಸಮಿತಿಗೆ ವಹಿಸುವ ಮೂಲಕ ಕಾಲಹರಣ ಮಾಡುತ್ತಿದೆ ಎಂದು ಸ್ವಾಮೀಜಿ ದೂರಿದರು.

ಸರ್ಕಾರದ ಈ ಎಲ್ಲಾ ನಡೆಗಳನ್ನು ಸಮಾಜದವರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂಬರುವ ಚುನಾವಣೆಗಳಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು.

ಮಠದ ಸಂಸ್ಥಾಪಕ ಧರ್ಮದರ್ಶಿಗಳೂ ಆದ ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿ,  ತಿಂಥಿಣಿ ಬಳಿ ಮತ್ತು ಮೈಸೂರಿನಲ್ಲಿ ಶೀಘ್ರವೇ ಶಾಖಾಮಠ ನಿರ್ಮಾಣ ಮಾಡಲಾಗುವುದೆಂದು ಜಾರಕಿಹೊಳಿ ತಿಳಿಸಿದರು.

4ನೇ ವರ್ಷದ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷರೂ ಆದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ,   ಜಾತ್ರೆಯನ್ನು ಮುಂದೂಡಿರುವ ಬಗ್ಗೆ ಜನ ಬೇಸರಗೊಳ್ಳಬಾರದು ಎಂದು ಮನವಿ ಮಾಡಿದರು.

ಪ್ರೊ. ಎ.ಬಿ.ರಾಮಚಂದ್ರಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರಹಟ್ಟಿ ಮಾಜಿ ಶಾಸಕ ರಾಮಕೃಷ್ಣ, ಮಠದ ಧರ್ಮದರ್ಶಿಗಳಾದ ಬಿ.ವೀರಣ್ಣ, ನಲುವಾಗಲು ನಾಗರಾಜಪ್ಪ, ಶಿವಮೊಗ್ಗದ ಬಸವರಾಜಪ್ಪ, ಕೆ.ಬಿ.ಮಂಜುನಾಥ್, ಕೋಲಾರದ ವೆಂಕಟರಮಣ, ಹಾಸನದ ಮಹೇಶ್, ವಿಜಯಪುರದ ಮಲ್ಲಪ್ಪ ಕೌಲಗಿ, ಬಳ್ಳಾರಿ ಜಿಲ್ಲೆ ಹೊಸಪೇಟೆಯ ಜಂಬಣ್ಣ ನಾಯಕ, ಸಮಾಜದ ಜಿಲ್ಲಾಧ್ಯಕ್ಷರಾದ ಕೊಪ್ಪಳದ ರತ್ನಾಕರ್, ಹಾಸನದ ರವಿಕುಮಾರ್, ಚಿಕ್ಕಮಗಳೂರಿನ ಜಿ.ಕೆ.ಭೀಮಪ್ಪ, ಬಾಗಲಕೋಟೆಯ ದ್ಯಾಮಣ್ಣ ಗಾಳಿ, ಬಳ್ಳಾರಿಯ ದೊಡ್ಡ ಎರೇಸ್ವಾಮಿ, ಮಂಡ್ಯದ ಜಗದೀಶ್, ಸಮಾಜದ ಮುಖಂಡರಾದ ಕೆ.ಪಿ.ಪಾಲಯ್ಯ, ಟಿ.ಈಶ್ವರ್, ಹೊದಿಗೆರೆ ರಮೇಶ್, ಸಣ್ಣತಮ್ಮಪ್ಪ ಬಾರ್ಕಿ, ತಿಮ್ಮೇನಹಳ್ಳಿ ಚಂದಪ್ಪ, ಜಿಗಳಿ ಆನಂದಪ್ಪ, ಜಿಲ್ಲಾ ವಾಲ್ಮೀಕಿ ಮಹಿಳಾ ಸಮಾಜದ ಶ್ರೀಮತಿ ಮಹಾಲಕ್ಷ್ಮಿ, ಶ್ರೀಮತಿ ವಿಜಯಶ್ರೀ, ಶ್ರೀಮತಿ ಗೌರಮ್ಮ, ಹರಿಹರದ ಪಾರ್ವತಿ, ಚಿತ್ರದುರ್ಗದ ರಾಜೇಶ್ವರಿ, ಹರಿಹರ ತಾ. ನಾಯಕ ಸಮಾಜದ ಅಧ್ಯಕ್ಷ ಜಿಗಳಿ ರಂಗಪ್ಪ, ಹರಪನಹಳ್ಳಿ ತಾ. ನಾಯಕ ಸಮಾಜದ ಅಧ್ಯಕ್ಷ ಕೆ.ಉಚ್ಚೆಂಗಪ್ಪ, ಪತ್ರಕರ್ತ ಜಿಗಳಿ ಪ್ರಕಾಶ್ ಸೇರಿದಂತೆ ಇನ್ನೂ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.

ಜಾತ್ರಾ ಸಮಿತಿ ಸಂಚಾಲಕ ಹರ್ತಿಕೋಟೆ ವೀರೇಂದ್ರ ಸಿಂಹ ಸ್ವಾಗತಿಸಿದರು.

error: Content is protected !!