ಹೊಲಿಗೆ ತರಬೇತಿ, ಬ್ಯೂಟಿಷಿಯನ್, ಮೆಹಂದಿ ತರಬೇತಿ ಶಿಬಿರ ಆರಂಭ

ನೊಂದವರ ಬಾಳಲ್ಲಿ ಭರವಸೆಯ ಬೆಳಕು ಮೂಡಿಸುತ್ತಿರುವ ಸಂಕಲ್ಪ ಸೇವಾ ಫೌಂಡೇಶನ್ ಸೇವೆ ಶ್ಲ್ಯಾಘನೀಯ.

– ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ.

ದಾವಣಗೆರೆ, ಜ. 30- ನೊಂದವರ ಬಾಳಲ್ಲಿ ಭರವಸೆಯ ಬೆಳಕು ಮೂಡಿಸುವ ನಿಟ್ಟಿನಲ್ಲಿ ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಂಕಲ್ಪ ಸೇವಾ ಫೌಂಡೇಷನ್ ವತಿಯಿಂದ ಮಹಿಳೆಯರಿಗಾಗಿ ಹೊಲಿಗೆ ತರಬೇತಿ, ಬ್ಯೂಟೀಷಿಯನ್ ಮತ್ತು ಮೆಹಂದಿ ತರಬೇತಿ ನೀಡುವ ಶಿಬಿರ ಇಂದು ಆರಂಭವಾಯಿತು.

ಈ ಸಂಬಂಧ ಪಿ.ಜೆ. ಬಡಾವಣೆ 3ನೇ ಮುಖ್ಯರಸ್ತೆಯಲ್ಲಿರುವ ಮೇಕ್ ಓವರ್ ಬ್ಯೂಟಿ ಸ್ಟುಡಿಯೋ ಆವರಣದಲ್ಲಿ ಏರ್ಪಾಡಾಗಿದ್ದ ಸರಳ ಸಮಾರಂಭದಲ್ಲಿ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಗಿಡಕ್ಕೆ ನೀರೇರೆಯುವುದರ ಮೂಲಕ ಶಿಬಿರವನ್ನು ಉದ್ಘಾಟಿಸಿದರು.

ಆಶೀರ್ವಚನ ನೀಡಿದ ಶ್ರೀಗಳು, ಇಂದು ಒಂದು ಸುಸ್ಥಿತವಾಗಿರಬೇಕಾದರೆ ಗೃಹಿಣಿಯ ಜವಾಬ್ದಾರಿ ಮತ್ತು ಶ್ರಮ ಕಾರಣವಾಗಿದ್ದು, ಆಕೆಯ ಕುಟುಂಬದ ಬದುಕನ್ನು ಕಟ್ಟಿಕೊಡುವಲ್ಲಿ ಇಂತಹ ತರಬೇತಿ ಶಿಬಿರಗಳು ವೇದಿಕೆಯಾಗುವುದರ ಮೂಲಕ ಮಾದರಿಯಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಂದೀಪ್ ನರ್ಸಿಂಗ್ ಹೋಂ ಹಿರಿಯ ವೈದ್ಯರೂ, ದಾನಿಗಳೂ ಆಗಿರುವ ಡಾ.ಹೆಚ್.ಎನ್. ಮಲ್ಲಿಕಾರ್ಜುನಪ್ಪ ಅವರು ಶಿಬಿರಾರ್ಥಿಗಳಾದ ಮಹಿಳೆಯರನ್ನುದ್ದೇಶಿಸಿ ಮಾತನಾಡಿ, ನಿಮ್ಮ ಬಾಳಿನ ಮೇಲೆ ಬೆಳಕು ಚೆಲ್ಲುವಂತಹ ತರಬೇತಿ ನಿಮ್ಮದಾಗಿರಲಿ ಎಂದು ಆಶಯ ವ್ಯಕ್ತಪಡಿಸಿದರು.

ಮತ್ತೋರ್ವ ಅತಿಥಿಯಾಗಿದ್ದ `ಜನತಾವಾಣಿ’ ಉಪ ಸಂಪಾದಕ ಇ.ಎಂ. ಮಂಜುನಾಥ ಅವರು ಕೂಡಾ ಮಾತನಾಡಿ, ಈ ತರಬೇತಿಯು ನಿಮ್ಮ ಬದುಕಿಗೆ ಚೈತನ್ಯ ತರುವಂತಹ ಶಿಬಿರವಾಗಿರಲಿ ಎಂದು ಆಶಿಸಿದರು.

ಮಹಾನಗರ ಪಾಲಿಕೆ ಸದಸ್ಯ ಎಂ. ಪ್ರಸನ್ನಕುಮಾರ್, ಅಭಿ ಕಾಟನ್ ಮಾಲೀಕ ಎನ್. ಬಕ್ಕೇಶ್, ಹಿರಿಯ ಯೋಗಪಟುಗಳಾದ ಕಣಕುಪ್ಪಿ ಕರಿಬಸಪ್ಪ, ಉತ್ತಂಗಿ ಪ್ರಕಾಶ್ ಅವರುಗಳು ಆಶಯ ನುಡಿಗಳನ್ನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಕಲ್ಪ ಸೇವಾ ಫೌಂಡೇಷನ್ ಅಧ್ಯಕ್ಷ ಜಿ. ಮಹಾಂತೇಶ್, ತಮ್ಮ ಸಂಸ್ಥೆ ಸಂಕಲ್ಪ ಸೇವಾ ಫೌಂಡೇಷನ್ ಧ್ಯೇಯಗಳನ್ನು ವಿವರಿಸಿ, ನೊಂದವರ ಕಣ್ಣೊರೆಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಗುರಿಯನ್ನಿಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.

ವಿ – ಒನ್ ಚಾನಲ್‌ನ ಚಿದಾನಂದ್, ಕಿರಣ್ ಕುಮಾರ್, ಗಿರೀಶ್, ಕೆ.ಜೆ. ನಾಗರಾಜ್, ಕೆ.ಜೆ. ಬದರೀಪ್ರಸಾದ್, ಬಾದಾಮಿ ಜಯಣ್ಣ, ರಾಮಚಂದ್ರಶೆಟ್ಟಿ, ರಾಜು, ಬಸವರಾಜು, ಮಾಲಾ, ಯಾಸ್ಮೀನ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೇಕ್ ಓವರ್ ಬ್ಯೂಟಿ ಸ್ಟುಡಿಯೋ ಮಾಲೀಕರು, ಹಿರಿಯ ಬ್ಯೂಟೀಷಿಯನ್ ಆದ ಶ್ರೀಮತಿ ಲಕ್ಷ್ಮಿ ಮತ್ತು ಬಿಐಇಟಿಯ ಮೆಕ್ಯಾನಿಕಲ್ ವಿಭಾಗದ ಯು.ಎಂ. ಸುರೇಶ್ ದಂಪತಿ ಸ್ವಾಗತಿಸಿದರು. 

ಸಂಕಲ್ಪ ಸೇವಾ ಫೌಂಡೇಷನ್ ಕಾರ್ಯದರ್ಶಿ ಅನಿಲ್ ಕುಮಾರ್ ಬಿ. ರಾಯ್ಕರ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!