ಬದುಕಿನುದ್ದಕ್ಕೂ ಸಮಾಜದ ಒಳಿತು ಬಯಸಿದ ಸಿದ್ಧಲಿಂಗ ಶ್ರೀಗಳು

ಬದುಕಿನುದ್ದಕ್ಕೂ ಸಮಾಜದ ಒಳಿತು ಬಯಸಿದ ಸಿದ್ಧಲಿಂಗ ಶ್ರೀಗಳು - Janathavaniರಾಣೇಬೆನ್ನೂರು, ಜ.30- ಬದುಕಿನುದ್ದಕ್ಕೂ ಸಮಾಜದ ಒಳಿತನ್ನೇ ಬಯಸಿದವರು, ಸರಳ ಬದುಕು ನಡೆಸಿದ ಕೀರ್ತಿ ಉಜ್ಜಯಿನಿ ಲಿಂ. ಶ್ರೀ   ಸಿದ್ಧಲಿಂಗ ಸ್ವಾಮಿಗಳವರಿಗೆ ಸಲ್ಲುತ್ತದೆ ಎಂದು ರಂಭಾಪುರಿ ಜಗದ್ಗುರು ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಭಗವತ್ಪಾದರು ನುಡಿದರು.

ಅವರು ಇಲ್ಲಿನ ಶನೇಶ್ಚರ ಮಠದಲ್ಲಿ ಉಜ್ಜಯಿನಿ ಜಗದ್ಗುರು ಸಿದ್ದಲಿಂಗಸ್ವಾಮಿಗಳ 85 ನೇ ಪುಣ್ಯಸ್ಮರಣೋತ್ಸವದಲ್ಲಿ ಆಶೀರ್ವಚನ ನೀಡುದರು.

ಕೇವಲ ಸ್ವಾಮೀಜಿಯಾಗಿ ಮಠದಲ್ಲಿ ಕುಳಿತುಕೊಳ್ಳದೇ, ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತಗೊಳ್ಳದೇ ಸಮಾಜದ ಒಳಿತಿಗಾಗಿ ಬದುಕನ್ನು ಸವೆಸಿದವರು ಎಂದು ಸಿದ್ಧಲಿಂಗ ಶ್ರೀಗಳ ಸಮಾಜ ಸೇವೆಯನ್ನು ಸ್ಮರಿಸಿದರು.

ದಿಕ್ಕು ತಪ್ಪಿದ ಸಮಾಜವನ್ನ ಸರಿದಾರಿಗೆ ತರಲು ಕೆಲವು ಮಠಗಳು, ಕೆಲವು ಮಠಾಧೀಶರು  ಪ್ರಯತ್ನ ಮಾಡುತ್ತಾರೆ. ಆ ಮಠಗಳಲ್ಲಿ ರಾಣೇಬೆನ್ನೂರು ಶನೇಶ್ಚರ ಮಠವು ಒಂದು ಎಂದು ಹೇಳಿದರು.

ಇಂದಿನ ಕಾಲಮಾನದಲ್ಲೂ ಸಹ  ನಾಡಿನ ಭಕ್ತರು ಮಠ ಹಾಗೂ ಮಠಾದೀಶರ ಮೇಲೆ ಅಪಾರ ನಂಬಿಕೆ ಹಾಗೂ ಭರವಸೆ ಇಟ್ಟುಕೊಂಡಿದ್ದಾರೆ. ಅದನ್ನ ಉಳಿಸಿಕೊಳ್ಳುವಲ್ಲಿ ಪಂಚಪೀಠ ಗಳು, ಶಾಖಾ ಮಠಗಳು ನಾಡಿನೆಲ್ಲೆಡೆ ಇಂಥಹ ಸಮಾಜಮುಖಿ ಕಾರ್ಯಕ್ರಮ ಗಳನ್ನ ಹಾಕಿಕೊಳ್ಳುತ್ತಿವೆ. ಈಗಿನ ಸಂತತಿ ಸಹ ಹಿರಿಯರಂತೆ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳಬೇಕು ಎಂದು  ತಿಳಿಸಿದರು.

ಸಿದ್ದಲಿಂಗ ಶ್ರೀಗಳ ಪುಣ್ಯಾರಾಧನೆ ಅಂಗವಾಗಿ 64 ಜಂಗಮ ದಂಪತಿಗಳಿಗೆ ಗೌರವ ಸಮರ್ಪಣೆ, ಜಗದ್ಗುರುಗಳ ಇಷ್ಠಲಿಂಗ ಪೂಜೆ, ಮುಂತಾದ ಕಾರ್ಯಕ್ರಮಗಳಿಂದ ದೊರಕುವ ಪುಣ್ಯ ವಿಶೇಷದ ಬಗ್ಗೆ ಹಾಗೂ ಇದಕ್ಕೆ ಸಹಾಯ, ಸಹಕಾರ ನೀಡಿದವರ ಬಗ್ಗೆ ಮಠದ ಪೀಠಾಧಿಪತಿ ಶಿವಯೋಗಿ ಮಹಾಸ್ವಾಮಿಗಳು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ವಿವರಿಸಿದರು.

ಡಾ. ಮಹೇಶ್ವರ ಶ್ರೀ,  ಗುರು ಮಹೇಶ್ವರ ಶ್ರೀ, ಗುರುಶಾಂತ ಶಿವಯೋಗಿ ಶ್ರೀ ನೆಗಳೂರು, ಅಭಿನವರುದ್ರ ಮಲ್ಲಿಕಾರ್ಜುನ ಶ್ರೀ ಅಕ್ಕಿಆಲೂರು, ಹಾವೇರಿ ಬಣ್ಣದ ಮಠ ಶ್ರೀ, ಗುರು ನಂಜೇಶ್ವರ ಶ್ರೀ ಕೂಡಲ, ಜಗದೀಶ್ವರ ಶ್ರೀ ಕುಮಾರಪಟ್ನಂ, ನಂಜುಂಡ ಪಂಡಿತಾರಾಧ್ಯ ಶ್ರೀ ಹೆರೂರ, ಶಾಸಕ ಅರುಣಕುಮಾರ ಪೂಜಾರ, ಆಡಳಿತಮಂಡಳಿ ಅಧ್ಯಕ್ಷ ಎಸ್.ಎಸ್. ರಾಮಲಿಂಗಣ್ಣನವರ, ರವೀಂದ್ರಗೌಡ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!