ಸ್ವಾತಂತ್ರ್ಯಕ್ಕೆ ಬೋಸ್‌ರ ಕ್ರಾಂತಿ ಕಾರಣ

ಜಯನಗರದಲ್ಲಿನ ಗಣರಾಜ್ಯೋತ್ಸವದಲ್ಲಿ ಬಿಜೆಪಿ ಹಿರಿಯ ಮುಖಂಡರೂ ಆದ ವಕೀಲ ಎ.ವೈ. ಪ್ರಕಾಶ್

ದಾವಣಗೆರೆ, ಜ. 28- ಗಾಂಧೀಜಿಯವರ ಅಹಿಂಸಾ ಚಳುವಳಿಯಿಂದ ಮಾತ್ರ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿಲ್ಲ. ಸುಭಾಷ್‌ಚಂದ್ರ ಬೋಸ್ ಅವರ ಕ್ರಾಂತಿಯೂ ಕಾರಣವಾಗಿದೆ ಎಂದು  ಬಿಜೆಪಿ ಹಿರಿಯ ಮುಖಂಡರೂ ಆದ ವಕೀಲ ಎ.ವೈ. ಪ್ರಕಾಶ್ ತಿಳಿಸಿದರು.

ಇಲ್ಲಿನ ಜಯನಗರ ಸಿ ಬ್ಲಾಕ್‌ನ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಕದಂಬ ಉದ್ಯಾನವನ ದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1947ರಲ್ಲಿ ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ಸ್ವಾತಂತ್ರ್ಯ ನೀಡಿದರು. ಆದರೆ ಅದಕ್ಕಿಂತ ಮೂರು ವರ್ಷ ಮುಂಚೇನೆ ನಿಮ್ಮ ರಕ್ತ ಕೊಡಿ, ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎನ್ನುತ್ತಾ, ಯುವಕರನ್ನು ತಮ್ಮೆಡೆಗೆ ಸೆಳೆದುಕೊಂಡು ಕ್ರಾಂತಿಕಾರಿ ಹೋರಾಟಗಳ ಮೂಲಕ ದೇಶದ ಜನತೆಯನ್ನು ಬಡಿದೆಬ್ಬಿಸಿ, ಸ್ವಾತಂತ್ರ್ಯಕ್ಕೆ ಹೋರಾಡಿ ದವರು ಸುಭಾಷ್‌ ಚಂದ್ರ ಬೋಸ್‌ ಎಂದರು.

ಅವರು ಸಿಂಗಾಪುರದಲ್ಲಿ ಪ್ರಥಮ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ, ಭಾರತ ಸರ್ಕಾರವನ್ನು ರಚಿಸಿದರು. ಭಾರತ ರಾಷ್ಟ್ರೀಯ ಸೇನೆ ಸ್ಥಾಪಿಸುವ ಮೂಲಕ ಪ್ರತ್ಯೇಕ ಸೇನೆ, ಪ್ರತ್ಯೇಕ ಕರೆನ್ಸಿ ಹೀಗೆ ಅನೇಕ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸಿದರು. ಅವರ ಹೋರಾಟಗಳಿಗೆ ಆಗಿನ ಅಹಿಂಸಾವಾದಿಗಳು ಎನ್ನುವವರು ಬೆಂಬಲಿಸಲಿಲ್ಲ. ಒಂದು ವೇಳೆ ಬೆಂಬಲಿಸಿದ್ದರೆ 1947ಕ್ಕಿಂತ ಮುಂಚೇನೆ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಸಂಭವನೀಯತೆ ಹೆಚ್ಚಾಗಿತ್ತು. ಇವುಗಳನ್ನೆಲ್ಲಾ ಹಿಂದೆ ಆಡಳಿತ ನಡೆಸಿದ ಪಕ್ಷಗಳ ಸರ್ಕಾರಗಳು ಇತಿಹಾಸ ತಿರುಚಿ ಮರೆಮಾಚಿವೆ ಎಂದು ಅಭಿಪ್ರಾಯಪಟ್ಟರು.

ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ. ಅಂಜಿನಪ್ಪ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಬಿ.ಕೋಜಪ್ಪ, ತುಳಜಾನಾಯಕ, ಶಂಕರ್‌ ನಾಯ್ಕ, ಅಂಜನಮೂರ್ತಿ, ಸಮಿತಿಯ ಕಾರ್ಯದರ್ಶಿ ಪಿ.ಎಸ್. ನಾಗರಾಜ, ಸುರೇಶ ಹೆಡ್ಲಿಗೇರಿ ಮತ್ತು ಇತರರು ಭಾಗವಹಿಸಿದ್ದರು.

error: Content is protected !!