ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಶಾಸಕ ರಾಮಪ್ಪ ಕಳಕಳಿ
ಮಲೇಬೆನ್ನೂರು, ಜ.27- ಶಾಲೆಗಳು ದೇವಸ್ಥಾನಗಳಿದ್ದಂತೆ, ದೇವಸ್ಥಾನಗಳಂತೆ ಇಲ್ಲಿಯೂ ಸ್ವಚ್ಛತೆ, ಭಯ- ಭಕ್ತಿ ಇರಬೇಕು ಎಂದು ಶಾಸಕ ಎಸ್. ರಾಮಪ್ಪ ಅವರು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಸರ್ಕಾರದ ಸಮವಸ್ತ್ರಗಳನ್ನು ಮತ್ತು ಬೆಂಗಳೂರಿನ ಮಾರುತಿ ಮೆಡಿಕಲ್ಸ್ ನ ಮಹೇಂದ್ರ ಮುಣೋತ ಅವರು ಕೊಡುಗೆಯಾಗಿ ನೀಡಲಾಗಿದ್ದ ನೋಟ್ ಬುಕ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಶಾಸಕರು ಮಾತನಾಡಿದರು.
ಸರ್ಕಾರಿ ಶಾಲೆಗಳೆಂದರೆ ಅಸಡ್ದೆ, ಉದಾಸೀನವನ್ನು ಯಾರೂ ಮಾಡಬಾರದು, ಇದು ನಿಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ದೇಗುಲವಿದ್ದಂತೆ, ಇದನ್ನು ನೀವು- ನಾವೆಲ್ಲರೂ ಸೇರಿ ನಮ್ಮ ಮನೆಯಂತೆ ಜವಾಬ್ದಾರಿಯಿಂದ ನೋಡಿಕೊಳ್ಳಬೇಕಾಗಿದೆ ಎಂದರು.
ವಿದ್ಯಾರ್ಥಿಗಳೂ ಸಹ ಪೋಷಕರ, ಶಿಕ್ಷಕರ ಮತ್ತು ಸರ್ಕಾರದ ಶ್ರಮವನ್ನು ಅರ್ಥಮಾಡಿಕೊಂಡು ಚನ್ನಾಗಿ ಓದಿ ಶಾಲೆಗೆ, ಊರಿಗೆ, ಶಿಕ್ಷಕರಿಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕೆಂದು ಶಾಸಕ ರಾಮಪ್ಪ ಹುರಿದುಂಬಿಸಿದರು.
ಶಾಲೆಗೆ ಅವಶ್ಯವಿರುವ ಶೌಚಾಲಯ, ಕಾಂಪೌಂಡ್ ಹಾಗು ಶುದ್ಧ ನೀರಿನ ಘಟಕವನ್ನು ಶೀಘ್ರದಲ್ಲಿಯೇ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ ಶಾಸಕರು, ಪಾಳು ಬಿದ್ದಿರುವ ಬಾಪೂಜಿ ಹಾಲ್ ಅನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಿ, ಅದಕ್ಕೆ ಭವನ ಎಂಬ ಹೆಸರಿಟ್ಟು ಹೈಟೆಕ್ ಗ್ರಂಥಾಲಯ ಸೇರಿದಂತೆ, ವಿವಿಧ ಕಚೇರಿಗಳಿಗೆ ಅವಕಾಶ ನೀಡುವ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಅಬು ಸಾಲೇಹ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ರುಕ್ಮಿಣಿ, ಎಸ್.ಡಿ.ಎಂ.ಸಿ ಸದಸ್ಯರಾದ ಆಸಿಫ್ ಅಲಿ, ಎಂ.ಬಿ.ರುಸ್ತುಂ, ಓ.ಜಿ.ಮಂಜು, ಚಂದ್ರಮ್ಮ, ಪೂಜಾರ್ ಬೀರಪ್ಪ, ಕಾಲೇಜಿನ ಉಪಾಧ್ಯಕ್ಷ ಮೀರ್ ಅಜಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ, ಪುರಸಭೆ ಸದಸ್ಯರಾದ ಸಾಬೀರ್ ಅಲಿ, ಭೋವಿ ಶಿವು, ಕೆ.ಪಿ.ಗಂಗಾಧರ್, ವರ್ತಕ ನಯಾಜ್, ಪಿ.ಹೆಚ್.ಶಿವಕುಮಾರ್, ಕುಂಬಳೂರಿನ ಎಂ.ವಾಸುದೇವ ಮೂರ್ತಿ, ಹಾಲಿವಾಣದ ರೇವಣಸಿದ್ದಪ್ಪ, ಕೊಕ್ಕನೂರಿನ ಚಂದ್ರಪ್ಪ, ಕೊಟ್ರೇಶ್ ನಾಯ್ಕ, ಕಾಲೇಜಿನ ಉಪ ಪ್ರಾಚಾರ್ಯ ಹೆಚ್. ಎಸ್. ರಂಗಪ್ಪ ಉಪಸ್ಥಿತರಿದ್ದರು.
ಎಸ್.ಡಿ.ಎಂ.ಸಿ ಸದಸ್ಯ ಹೆಚ್. ಎಂ. ಸದಾನಂದ ಸ್ವಾಗತಿಸಿದರು. ಪ್ರಭಾರ ಮುಖ್ಯ ಶಿಕ್ಷಕ ರಾಮಪ್ಪ ಸೋಮಣ್ಣನವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ರೇವಣಪ್ಪ ವಂದಿಸಿದರು.