‘ಸಾಚಾರ್ ವರದಿ’ ವಿಚಾರ ಸಂಕಿರಣದಲ್ಲಿ ಡಾ. ರಝಾಕ್ ಉಸ್ತಾದ್ ಬೇಸರ
ದಾವಣಗೆರೆ, ಜ.27- ಸಾಚಾರ್ ವರದಿ ಅನುಷ್ಠಾನದಿಂದ ಮುಸ್ಲಿಮರ ಸುಧಾರಣೆ ಸಾಧ್ಯವಿದೆ. ಆದರೆ ಆಡಳಿತಾ ರೂಢ ಯಾವುದೇ ಸರ್ಕಾರ ಈ ವರದಿಯ ಸಂಪೂರ್ಣ ಜಾರಿಗೆ ಮುಂದಾಗುತ್ತಿಲ್ಲ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ. ರಝಾಕ್ ಉಸ್ತಾದ್ ಅವರು ಬೇಸರ ವ್ಯಕ್ತಪಡಿಸಿದರು.
ನಗರದ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಕಚೇರಿ ಸಭಾಂಗಣದಲ್ಲಿ ಕಳೆದ ವಾರ ಹಮ್ಮಿಕೊಂಡಿದ್ದ ‘ಸಾಚಾರ್ ವರದಿ’ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಜನಸಂಖ್ಯೆಯಲ್ಲಿ ಶೇ. 14ರಷ್ಟು ಮುಸ್ಲಿಮರೇ ಇದ್ದಾರೆ. 6 ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಶೇ. 96ರಷ್ಟು ಮುಸ್ಲಿಮರು ಆಗಿದ್ದಾರೆ. ಈ ಸಮುದಾಯದ ರಾಜಕೀಯ ಮತ್ತು ಔದ್ಯೋಗಿಕ ಪ್ರಾತಿನಿಧ್ಯ ಮತ್ತು ಶೈಕ್ಷಣಿಕ ಪ್ರಗತಿ ಬಗ್ಗೆ ಅಧ್ಯಯನ ಮಾಡಿದಾಗ ತೀರ ಕಡಿಮೆ ಇದೆ ಎಂಬುದನ್ನು ವರದಿಯಲ್ಲಿ ತಿಳಿಸಲಾಗಿದೆ. ದೇಶದ ಎಲ್ಲ ಸಮುದಾಯಗಳಲ್ಲಿ ಮುಸ್ಲಿಂ ಸಮುದಾ ಯದ ಸ್ಥಿತಿ ತೀರಾ ಶೋಚನೀಯವಾಗಿದೆ ಎಂದು ನ್ಯಾಯಮೂರ್ತಿ ರಾಜೀಂದರ್ ಸಾಚಾರ್ ಹೇಳಿದ್ದರು ಎಂದು ತಿಳಿಸಿದರು.
ಸಾಚಾರ್ ದೇಶದಾದ್ಯಂತ ತಿರುಗಾಡಿ ಮಾಹಿತಿ ಸಂಗ್ರಹಿಸಿ, ಅಂಕಿ-ಅಂಶ ಪಡೆದು 2006ರ ಫೆಬ್ರವರಿಯಲ್ಲಿ ವರದಿ ಸಲ್ಲಿಸಿದ್ದರು. ಅದರಲ್ಲಿ ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ 76 ಶಿಫಾರಸ್ಸುಗಳನ್ನು ಮಾಡಿದ್ದರು. ನಾಲ್ಕು ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಿತ್ತು. ಉಳಿದ 72 ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿತ್ತು. ಆದರೆ ಅದರಲ್ಲಿ 27 ಮಾತ್ರ ಅನುಷ್ಠಾನಕ್ಕೆ ತಂದಿದೆ ಎಂದು ಹೇಳಿದರು.
ಈ ವರದಿಯ ಕಾರಣದಿಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗಲು ಸಾಧ್ಯವಾಯಿತು. ಗ್ಯಾರೇಜ್, ಫಿಟ್ಟಿಂಗ್ ಸಹಿತ ಹಲವು ಕೌಶಲ್ಯಯುತ ಕೆಲಸಗಳಲ್ಲಿ ಈ ಸಮುದಾಯ ತೊಡಗಿಸಿಕೊಂಡಿದೆ. ಆದರೆ ಅವರು ಯಾರೂ ಅಧಿಕೃತ ತರಬೇತಿ ಪಡೆದವರಲ್ಲ. ಅವರಿಗೆ ತರಬೇತಿ ನೀಡುವ ಯೋಜನೆಯನ್ನು ಸರ್ಕಾರ ಜಾರಿ ಮಾಡಿತು. ಶೇ. 25ರಷ್ಟು ಮುಸ್ಲಿಂ ಜನಸಂಖ್ಯೆ ಇರುವ ಪ್ರದೇಶದಲ್ಲಿ ಶಾಲೆ, ಕಾಲೋನಿ ಅಭಿವೃದ್ಧಿಗೆ ಅವಕಾಶ ನೀಡಲಾಗಿದೆ. ಹೀಗೆ ಮತ್ತಷ್ಟು ಅಭಿವೃದ್ಧಿ ಕಾಣಬೇಕಿದೆ ಎಂದರು.
ಭಾರತೀಯ ಮುಸ್ಲಿಮರ ಸ್ಥಿತಿಗತಿಗಳು–ಸಾಚಾರ್ ವರದಿಯ ಸಾರಾಂಶ ಕೃತಿ ಸಂಗ್ರಹಿಸಿರುವ ರಾಜಾಭಕ್ಷಿ ಹೆಚ್.ವಿ. ಮಾತನಾಡಿ, ಸಾಚಾರ್ ವರದಿ ಸಲ್ಲಿಕೆಯಾಗಿ 15 ವರ್ಷಗಳು ದಾಟಿದವು. ಇನ್ನು 15 ವರ್ಷ ದಾಟಿದರೂ ಸಮುದಾಯ ಸುಧಾರಣೆ ಆಗುವ ಲಕ್ಷಣ ಕಾಣುತ್ತಿಲ್ಲ. ಇಲ್ಲಿಯವರೆಗೆ ನಮ್ಮನ್ನು ಉದ್ಧಾರ ಮಾಡುತ್ತೇವೆ ಎಂದ ವರು ಆಳುತ್ತಿದ್ದರು. ಈಗ ನಾವು ಬೇಡ ಎನ್ನುವವರೇ ಆಡಳಿತ ಮಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷರಾದ ಜಬೀನಾ ಖಾನಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಶಿರಿನ್ಬಾನು ಸೇರಿದಂತೆ ಇತರರು ಇದ್ದರು. ಕಾರ್ಯದರ್ಶಿ ಎಂ. ಕರಿಬಸಪ್ಪ ನಿರೂಪಿಸಿದರು.