ಎಂಇಎಸ್‌ ಪುಂಡರ ದೌರ್ಜನ್ಯಕ್ಕೆ ತಕ್ಕ ಉತ್ತರ ನೀಡಿದ ದಿಟ್ಟ ಕನ್ನಡತಿ ಚಿಂದೋಡಿ ಲೀಲಾ

ಚಿಂದೋಡಿ ಲೀಲಾ ಅವರ 12ನೇ ವರ್ಷದ ಸ್ಮರಣೋತ್ಸವದಲ್ಲಿ ಹಿರಿಯ ಪತ್ರಕರ್ತ ಬಸವರಾಜ ಐರಣಿ ಮೆಚ್ಚುಗೆ

ಕಲಾವಿದರಿಗೆ ಸಹಕಾರ

ಕರ್ನಾಟಕದಲ್ಲಿ ನಾಟಕ ಕಂಪನಿ ಎಂದರೆ ಗುಬ್ಬಿ ವೀರಣ್ಣನವರ ಕಂಪನಿಯ ಹೆಸರೇ ಕೇಳಿ ಬರುತ್ತದೆ. ಆದರೆ, ನಮ್ಮ ದಾವಣಗೆರೆಯಲ್ಲೇ ಹುಟ್ಟಿ ಬೆಳೆದಿರುವ ಕೆಬಿಆರ್ ನಾಟಕ ಕಂಪನಿ, ಗುಬ್ಬಿ ಕಂಪನಿಗೆ ಯಾವುದರಲ್ಲೂ ಕಡಿಮೆ ಇಲ್ಲ. ಅಷ್ಟೊಂದು ಭವ್ಯ ಇತಿಹಾಸ ನಗರದ ರಂಗಭೂಮಿಗೆ ಇದೆ. ಈ ಭವ್ಯತೆ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಇಲಾಖೆಯು ವೃತ್ತಿ ರಂಗಭೂಮಿ ಕಲಾವಿದರಿಗೆ ಸಹಕಾರ ನೀಡಲಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ತಿಳಿಸಿದರು.

ದಾವಣಗೆರೆ, ಜ. 27- ಮರಾಠಿಗರ ಪ್ರಾಬಲ್ಯವಿರುವ ಬೆಳಗಾವಿಯ ಗಡಿ ಭಾಗದ ಊರುಗಳಲ್ಲಿ ಯಶಸ್ವಿಯಾಗಿ ನಾಟಕ ಪ್ರದರ್ಶನ ನಡೆಸುವ ಮೂಲಕ ಎಂಇಎಸ್ ಪುಂಡರ ದೌರ್ಜನ್ಯಕ್ಕೆ ತಕ್ಕ ಉತ್ತರ ನೀಡಿದ ದಿಟ್ಟ ಕನ್ನಡತಿ ಚಿಂದೋಡಿ ಲೀಲಾ ಎಂದು ಹಿರಿಯ ಪತ್ರಕರ್ತ ಐರಣಿ ಬಸವರಾಜ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಎಂಸಿಸಿ `ಬಿ’ ಬ್ಲಾಕ್‌ನ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ಪದ್ಮಶ್ರೀ ಚಿಂದೋಡಿ ಲೀಲಾ ಟ್ರಸ್ಟ್ ವತಿಯಿಂದ ಮೊನ್ನೆ ಹಮ್ಮಿಕೊಂಡಿದ್ದ ಚಿಂದೋಡಿ ಲೀಲಾ ಅವರ 12ನೇ ವರ್ಷದ ರಂಗ ಸ್ಮರಣೆ ಹಾಗೂ ರಂಗಭೂಮಿ ಕಲಾವಿದರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಎಂಇಎಸ್ ಬೆದರಿಕೆಗೆ ಜಗ್ಗದೆ, ನಾಟಕ ಪ್ರದರ್ಶಿಸುವ ಜೊತೆಗೆ ಬೆಳಗಾವಿಯಲ್ಲಿ ರಂಗ ಮಂದಿರ ನಿರ್ಮಿಸಿದ ಚಿಂದೋಡಿ ಲೀಲಾ ಅವರನ್ನು ಅಭಿನಯ ಕಿತ್ತೂರು ಚೆನ್ನಮ್ಮ ಎಂದು ಕರೆದಿದ್ದರು ಎಂದು ಅವರು ಸ್ಮರಿಸಿದರು.

ನಾಡು ಕಂಡ ಒಬ್ಬ ಪ್ರಬುದ್ಧ ಅಭಿನೇತ್ರಿಯಾಗಿದ್ದ ಚಿಂದೋಡಿ ಲೀಲಾ, ನಾಟಕ ಕಲೆ ಮೂಲಕ ಕನ್ನಡ ನುಡಿ ಸೇವೆ ಮಾಡಿದ್ದಾರೆ. ದಾವಣಗೆರೆ ನಗರದ ಸಾಮಾಜಿಕ, ಧಾರ್ಮಿಕ ಹಾಗೂ ಕಲಾ ಕ್ಷೇತ್ರದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇಲ್ಲಿನ ಸೋಮೇಶ್ವರ ದೇವಾಲಯ, ಕಲಾಕ್ಷೇತ್ರ ಹಾಗೂ ಶಂಕರ ಲೀಲಾ ಕಲ್ಯಾಣ ಮಂಟಪಗಳು ಅವರ ಕೊಡುಗೆಗಳು, ಸಾವಿರಾರು ಕಲಾವಿದರಿಗೆ ಅವರು ಪ್ರೇರಣೆಯಾಗಿ ದ್ದಾರೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ವೃತ್ತಿ ರಂಗಭೂಮಿ ಕಲಾವಿದರು ಇಂದು ಸಂಕಷ್ಟದಲ್ಲಿದ್ದಾರೆ. ನಗರಕ್ಕೆ ಬಂದು, ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ವೃತ್ತಿ ರಂಗಭೂಮಿ ಕಛೇರಿ ತೆರೆದ ಬಳಿಕ ಕಲಾವಿದರ ಕಷ್ಟಗಳು ಅರಿವಿಗೆ ಬರುತ್ತಿವೆ.  ಈ ಕುರಿತಂತೆ ಮೇಲಾಧಿಕಾರಿಗಳ ಪತ್ರ ಬರೆದಿದ್ದು,  ಕಲಾವಿದರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬಳಿಕ ಕುಮಾರ ನಾಟಕ ಸಂಘದ ಕಲಾವಿ ದರಿಂದ  `ನಕ್ಕೀತು ಅರಮನೆ ನಕ್ಕೀತು ಸೆರೆಮನೆ’ ನಾಟಕ ಪ್ರದರ್ಶನ ನಡೆಯಿತು. ಶ್ರೀ ಕುಮಾರ ನಾಟಕ ಸಂಘದ ಮಾಲೀಕ ಜಾಲ್ಯಾಳ ಮಂಜು ನಾಥ್, ಹಿರಿಯ ಕಲಾವಿದ, ಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ್, ಚಿಂದೋಡಿ ಮಧು ಕೇಶ್, ಚಿಂದೋಡಿ ವೀರಶಂಕರ್, ಚಿಂದೋಡಿ ಎಲ್. ಚಂದ್ರಧರ್, ಜ್ಞಾನೇಶ್ವರ ಜವಳಿ, ಚಿಂದೋಡಿ ಜಯಪ್ರಕಾಶ್ ಮತ್ತಿತರರಿದ್ದರು

error: Content is protected !!