ದಾವಣಗೆರೆ, ಜ.26- ಮೊಬೈಲ್ ಪ್ರೀಪೇಯ್ಡ್ ದರಗಳ ತೀವ್ರ ಹೆಚ್ಚಳವನ್ನು ವಿರೋಧಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್, ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ವತಿಯಿಂದ ರಾಷ್ಟ್ರವ್ಯಾಪಿ ಟ್ವಿಟ್ಟರ್ ಸ್ಟಾರ್ಮ್ ಚಳವಳಿ ನಡೆಸಲಾಯಿತು.
ಖಾಸಗಿ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ಇಂಟರ್ನೆಟ್ ಪ್ಯಾಕ್ ಮತ್ತು ಮೊಬೈಲ್ ರೀಚಾರ್ಜ್ ದರಗಳಲ್ಲಿ ಏರಿಸಿರುವ ಭಾರೀ ಹೆಚ್ಚಳದ ವಿರುದ್ಧ ಹಮ್ಮಿಕೊಂಡಿದ್ದ ಈ ಚಳವಳಿಯಲ್ಲಿ ರಾಜ್ಯಾದ್ಯಂತ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ ಯುವಜನರು, ಜನಸಾಮಾನ್ಯರು ಪಾಲ್ಗೊಂಡು ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ಲಾಕ್‍ಡೌನ್ ಸಮಯದಲ್ಲಿ ಮತ್ತು ನಂತರ ಮೊಬೈಲ್ ತಂತ್ರಜ್ಞಾನ ಮತ್ತು ಇಂಟರ್ನೆಟ್ ಸೇವೆಯ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಬಹುತೇಕ ಎಲ್ಲ ತರಗತಿಗಳ ವಿದ್ಯಾರ್ಥಿಗಳಿಗೂ ಆನ್‍ಲೈನ್ ತರಗತಿಗಳಲ್ಲಿ ಪಾಲ್ಗೊಳ್ಳಲು ಮೊಬೈಲ್ ಇಂಟರ್ನೆಟ್ ಸೇವೆ ಅಗತ್ಯವಾಗಿದೆ. ಪ್ರತಿಯೊಂದು ಕ್ಷೇತ್ರದ ಡಿಜಿಟಲೀಕರಣವು ಮೊಬೈಲ್ ಫೋನ್‍ಗಳ ಬಳಕೆಯ ಅಸಾಧಾರಣ ಹೆಚ್ಚಳಕ್ಕೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ದರಗಳನ್ನು ತೀವ್ರವಾಗಿ ಹೆಚ್ಚಿಸಿದ್ದು ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಯಿತು.
ಸಾರ್ವಜನಿಕ ವಲಯದ ಬಿಎಸ್‍ಎನ್‍ಎಲ್ ಬಲಿಕೊಟ್ಟು ಕೇವಲ ಒಂದೆರಡು ದೈತ್ಯ ಖಾಸಗಿ ಕಂಪನಿಗಳು ಟೆಲಿಕಾಂ ವಲಯದ ಮೇಲೆ ಏಕಸ್ವಾಮ್ಯ ಸಾಧಿಸುವಂತೆ ಮಾಡುವಲ್ಲಿ ಮೋದಿ ಸರ್ಕಾರವು ಅತ್ಯಂತ ಯಶಸ್ವಿಯಾಗಿದೆ. ಹೀಗಾಗಿ, ಇದು ಟೆಲಿಕಾಂ ಕ್ಷೇತ್ರದ ಸಂಪೂರ್ಣ ಖಾಸಗೀಕರಣದ ಹಾದಿಯನ್ನು ತೆರವುಗೊಳಿಸಿ ದೇಶದ ಫೋನ್ ಬಳಕೆದಾರರಿಗೆ ವಿನಾಶದ ಸಂಕೇತವನ್ನು ಸೂಚಿಸಿದೆ. ಮೊದಲಿನಿಂದಲೂ ಸರ್ಕಾರಗಳು ಖಾಸಗಿ ಟೆಲಿಕಾಂ ಕಂಪನಿಗಳತ್ತ ಒಲವು ತೋರಿವೆ ಎಂದು ಆಕ್ಷೇಪ ವ್ಯಕ್ತವಾಯಿತು.
ಎಐಡಿವೈಓ ಜಿಲ್ಲಾ ಸಮಿತಿಯ ಪರಶುರಾಮ್, ಅನಿಲ್ ಮನು, ಗುರು, ಶಶಿಕುಮಾರ್, ಅಮಿತ್, ಎಐಡಿಎಸ್‍ಓದ ಜಿಲ್ಲಾ ಕಾರ್ಯದರ್ಶಿ ಪೂಜಾ, ಕಾವ್ಯ, ಪುಷ್ಪ ಸೇರಿದಂತೆ ಇತರರು ಟ್ವಿಟ್ ಚಳವಳಿಯಲ್ಲಿ ಪಾಲ್ಗೊಂಡಿದ್ದರು.