ವಾಹನ ನಿಲುಗಡೆಯಿಂದ ಸಂಚಾರಕ್ಕೆ ತೊಂದರೆ

ಹರಿಹರದಲ್ಲಿ ಪಾದಚಾರಿಗಳ ಹರಸಾಹಸ, ಅಪಘಾತಗಳ ಅಪಾಯ

ಹರಿಹರ, ಜ.24- ನಗರದಲ್ಲಿ ವಿವಿಧ ಬ್ಯಾಂಕ್ ಮತ್ತು ವ್ಯಾಪಾರ, ವಹಿವಾಟು ನಡೆಸುವ ಅಂಗಡಿ ಮುಂದೆ  ರಸ್ತೆಯಲ್ಲಿ ಬೈಕ್ ನಿಲ್ಲಿಸುವುದರಿಂದ ಪಾದಚಾರಿಗಳಿಗೆ ಸರಾಗವಾಗಿ ಓಡಾಡಲು ತೊಂದರೆಯಾಗುತ್ತಿದೆ. 

ನಗರದ ಜನನಿಬಿಡ ಪ್ರದೇಶವಾದ ಮುಖ್ಯ ರಸ್ತೆ, ಹರಪನಹಳ್ಳಿ ರಸ್ತೆ, ದೇವಸ್ಥಾನ ರಸ್ತೆ, ಹಳೆ ಪಿ.ಬಿ. ರಸ್ತೆ, ಬಸ್ ನಿಲ್ದಾಣ ರಸ್ತೆ, ಹೆಚ್. ಶಿವಪ್ಪ ಸರ್ಕಲ್, ಹೈಸ್ಕೂಲ್ ಬಡಾವಣೆಯ ಮುಖ್ಯ ರಸ್ತೆ, ಟಿ.ಬಿ. ರಸ್ತೆ ಸೇರಿದಂತೆ ವಿವಿಧ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ತೊಂದರೆಗಳು ಆಗುತ್ತಿದೆ. 

ನಗರದಲ್ಲಿ ಕೆನರಾ, ಎಸ್.ಬಿ.ಐ. ಕಾರ್ಪೊರೇಷನ್, ಉಜ್ಜೀವನ್, ಆಕ್ಸಿಸ್, ವಿಜಯ ಬ್ಯಾಂಕ್ ಸೇರಿದಂತೆ ಅನೇಕ ಸಹಕಾರಿ ಮತ್ತು ಬ್ಯಾಂಕ್ ಕಟ್ಟಡಗಳು ಹಾಗೂ ವಿವಿಧ ಮಹಲ್, ಹೋಟೆಲ್, ಟಾಕೀಸ್ ಮತ್ತು ಪ್ರಸಿದ್ಧ ಎಸ್.ಜೆ.ವಿ.ಪಿ. ಕಾಲೇಜು, ಎಂ.ಆರ್.ಬಿ. ಪ್ರೌಢಶಾಲೆ, ಮರಿಯಾ ನಿವಾಸ್ ಶಾಲೆ, ತಹಶೀಲ್ದಾರರ ಕಚೇರಿ,  ಹಳೇ ಪಿ.ಬಿ ರಸ್ತೆಯಲ್ಲಿ  ಇರುವುದರಿಂದ ಇಲ್ಲಿಗೆ ಆಗಮಿಸುವ ಶಾಲೆ ಪೋಷಕರು ಮತ್ತು ಗ್ರಾಹಕರು ಹಾಗೂ ಇತರೆ ಕೆಲಸಕ್ಕೆ ಆಗಮಿಸುವವರು ತಮ್ಮ ವಾಹನಗಳನ್ನು ಗಂಟೆಗಳ ಕಾಲ ರಸ್ತೆಯಲ್ಲಿ ನಿಲ್ಲಿಸಿ ಹೋಗುತ್ತಾರೆ. 

ಇದರಿಂದಾಗಿ ಪಾದಚಾರಿಗಳಿಗೆ ಮತ್ತು ಬಸ್, ಲಾರಿ, ಟ್ಯಾಕ್ಸಿ ಮತ್ತು ಇತರೆ ವಾಹನಗಳು ರಸ್ತೆಯಲ್ಲಿ ಓಡಾಡುವ ಸಮಯದಲ್ಲಿ ಹರ ಸಾಹಸ ಪಡುತ್ತಾರೆ. ಸ್ವಲ್ಪ ಯಾಮಾರಿದರೆ ಅಪಘಾತ ಸಂಭವಿಸಿ, ಸಾವು-ನೋವುಗಳು ಆಗುವ ಸಂಭವ ಹೆಚ್ಚಿದೆ.

ಆದರೂ, ಸಂಬಂಧಿಸಿದ ಅಧಿಕಾರಿಗಳು ನೋಡಿಯೂ ನೋಡದ ರೀತಿಯಲ್ಲಿ ವರ್ತಿಸುತ್ತಿ ದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ನಗರಸಭೆ, ಪೊಲೀಸ್ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ರಸ್ತೆಯಲ್ಲಿ ನಿಲ್ಲಿಸುವ ವಾಹನ ಸವಾರರ ಮೇಲೆ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


– ಎಂ. ಚಿದಾನಂದ ಕಂಚಿಕೇರಿ,
[email protected]

error: Content is protected !!