ಶೀಘ್ರ 125 ಕೋಟಿ ರೂ. ಅಭಿವೃದ್ಧಿ ಕಾಮಗಾರಿ

 ಅಮರ್ ಜವಾನ್ ಸ್ಮಾರಕ ಹಾಗೂ ಉದ್ಯಾನವನದ 2 ನೇ ಹಂತದ 18 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಸಂಸದ ಸಿದ್ದೇಶ್ವರ

ದಾವಣಗೆರೆ, ಜ.24- ನಗರೋತ್ಥಾನ ಯೋಜನೆಯಡಿ 125 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿದ್ದು, ದಾವಣಗೆರೆಯನ್ನು ಸುಂದರ ನಗರವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಡಾ.ಜಿ.ಎಂ. ಸಿದ್ದೇಶ್ವರ ಹೇಳಿದರು.

ನಗರದ ನಿಜಲಿಂಗಪ್ಪ ಬಡಾವಣೆಯ ಬಯಲು ಜಾಗದಲ್ಲಿ ನಿರ್ಮಿಸಿರುವ ಅಮರ್ ಜವಾನ್ ಸ್ಮಾರಕ ಹಾಗೂ ಉದ್ಯಾನವನದ 2 ನೇ ಹಂತದ 18 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾಜಿ ಸೈನಿಕರ ಅಪೇಕ್ಷೆಯಂತೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಗುರುತಿಸಿದ ಸೂಕ್ತ ಜಾಗದಲ್ಲಿ ಅಮರ್ ಜವಾನ್ ಸ್ಮಾರಕ ನಿರ್ಮಿಸಿದ್ದು, ಇದು ದಾವಣಗೆರೆಗೆ ಕಳಸವಿಟ್ಟಂತೆ. ಬಿಜೆಪಿ ಆಡಳಿತದಲ್ಲಿ ಹುತಾತ್ಮರಿಗೆ ಹಾಗೂ ಮಾಜಿ ಸೈನಿಕರಿಗೆ ಗೌರವ ತರುವಂತಹ ಕೆಲಸವನ್ನು ಮಾಡಲಾಗಿದೆ ಎಂದರು.

ಸೈನಿಕರು ಮತ್ತು ರೈತರು ಇದ್ದರೆ ಮಾತ್ರ ದೇಶದ ಜನ ನೆಮ್ಮದಿ ಜೀವನ ನಡೆಸಲು ಸಾಧ್ಯ. ದೇಶದ ಗಡಿ ಕಾಯುವ ಮೂಲಕ ನಮ್ಮನ್ನು ಮತ್ತು ಸಂಪತ್ತನ್ನು ಸಂರಕ್ಷಿಸುವ ಕೆಲಸವನ್ನು ಸೈನಿಕರು ಮಾಡುತ್ತಿದ್ದು, ಪ್ರತಿಯೊಬ್ಬರೂ ಸಹ ಅವರಿಗೆ ಗೌರವ ಕೊಡುವುದು ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆ, ದೂಡಾ, ಮಹಾನಗರ ಪಾಲಿಕೆ, ತಮ್ಮ ಹಾಗೂ ಶಾಸಕ ರವೀಂದ್ರನಾಥ್ ಅವರ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. 15 ದಿನಗಳಲ್ಲಿ ನಗರದ ಎಲ್ಲಾ ವಾರ್ಡ್‌ಗಳಲ್ಲಿ ನಗರೋತ್ಥಾನ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲಿವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಮಾಜಿ ಸೈನಿಕರಿಗಾಗಿ ಕಡಿಮೆ ದರದಲ್ಲಿ ನಿವೇಶನ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದ್ದು, ಇದಕ್ಕಾಗಿ 75 ಎಕರೆ ಜಮೀನು ಖರೀದಿಸಿ, ನಿವೇಶನಗಳ ಹಂಚಿಕೆ ಜೊತೆಗೆ, ಅಮರ್‌ ಜವಾನ್ ಸ್ಮಾರಕ, ಉದ್ಯಾನವನ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, 50 ಸಾವಿರ ವಿದ್ಯಾರ್ಥಿಗಳು, 1 ಲಕ್ಷಕ್ಕೂ ಅಧಿಕ ಯುವ ಜನರು, 1 ಸಾವಿರಕ್ಕೂ ಹೆಚ್ಚು ಮಾಜಿ ಸೈನಿಕರ ಕುಟುಂಬಗಳಿವೆ. ಇದು ವಿದ್ಯಾರ್ಥಿ, ಯುವಜನರಿಗೆ ಸೈನ್ಯಕ್ಕೆ ಸೇರುವಂತೆ ಪ್ರೇರಣೆ ನೀಡಲಿ ಎಂಬ ಉದ್ದೇಶದಿಂದ ದಾವಣಗೆರೆ ನಗರದಲ್ಲಿ ಅಮರ್ ಜವಾನ್ ಸ್ಮಾರಕ ಮತ್ತು ಉದ್ಯಾನವನ ನಿರ್ಮಿಸಲಾಗಿದೆ ಎಂದು ಹೇಳಿದರು.

ಯೋಧರಿಗೆ, ಮಾಜಿ ಸೈನಿಕರಿಗೆ ಗೌರವ ತರುವ ಕೆಲಸ ಮಾಡುವುದು ಬಿಜೆಪಿ ಕಾರ್ಯಕರ್ತರಿಂದ ಮಾತ್ರ ಸಾಧ್ಯ. ಪಾಲಿಕೆಯಿಂದ ಆಗಬಹುದಾದ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಜಿ ಸೈನಿಕರಿಗೆ ಮಾಡಿಕೊಡಲಾಗುವುದು ಎಂದರು.

ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಮಾತನಾಡಿ, ಮಾಜಿ ಸೈನಿಕರಿಗಾಗಿ ಕಾಯ್ದಿರಿಸಿದ ಈ ಜಾಗದಲ್ಲಿ ಅಮರ್ ಜವಾನ್ ಸ್ಮಾರಕ ಮತ್ತು ಉದ್ಯಾನವನದ 2 ನೇ ಹಂತದ ಕಾಮಗಾರಿಯನ್ನು 18 ಲಕ್ಷ ರೂ. ವೆಚ್ಚದಲ್ಲಿ ಮಾಡಲಾಗುತ್ತಿದೆ. ಉದ್ಯಾನವನದ ಸುತ್ತಲೂ ಎಲ್‌ಇಡಿ ವಿದ್ಯುತ್ ದೀಪಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಸದಸ್ಯರಾದ ಬಾತಿ ಚಂದ್ರಶೇಖರ್, ಲಕ್ಷ್ಮಣ್, ಗೌರಮ್ಮ ಪಾಟೀಲ್, ಮಾರುತಿರಾವ್ ಘಾಟ್ಗೆ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ದಿಳ್ಳೆಪ್ಪ, ಸದಸ್ಯರಾದ ರೇಖಾ ಸುರೇಶ್ ಗಂಡಗಾಳೆ, ದೂಡಾ ಆಯುಕ್ತರಾದ ಬಿ.ಟಿ. ಕುಮಾರಸ್ವಾಮಿ, ಎಇಇ ಶ್ರೀಕರ್, ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸತ್ಯಪ್ರಕಾಶ್, ಉಪಾಧ್ಯಕ್ಷ ಮನೋಹರ ಮಹೇಂದ್ರಕರ್ ಮತ್ತಿತರರಿದ್ದರು.

error: Content is protected !!