ದಾವಣಗೆರೆ, ಜ.24- ನಾಯಕ ಸಮಾಜದ ಬೇಡಿಕೆಯಂತೆ ವಿದ್ಯಾರ್ಥಿನಿಯರ ನಿಲಯಕ್ಕೆ ಅರ್ಜಿ ಸಲ್ಲಿಸುವ ಮುಖೇನ ಮನವಿ ಮಾಡಿದರೆ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ನಿವೇಶನ ದೊರಕಿಸಿಕೊಡುವುದಾಗಿ ಸಂಸದ ಜಿ.ಎಂ. ಸಿದ್ದೇಶ್ವರ ವಾಗ್ದಾನ ನೀಡಿದರು.
ಅವರು, ಇಂದು ನಗರ ಪಾಲಿಕೆಯ 65.89 ಲಕ್ಷ ರೂ. ಅನುದಾನದಲ್ಲಿ ನಾಯಕರ ವಿದ್ಯಾರ್ಥಿ ನಿಲಯದ ಮೂಲ ಸೌಕರ್ಯ ಅಭಿವೃದ್ಧಿ ಕಾಮ ಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸದರ ಭಾಷಣಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಮುಖಂಡ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ವಾಲ್ಮೀಕಿ ನಾಯಕ ಸಮುದಾಯದ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯಕ್ಕೆ ಜಾಗ ನೀಡುವಂತೆ ಮನವಿ ಮಾಡಿಕೊಂಡರು.
ನಂತರ ಮಾತನಾಡಿದ ಸಂಸದ ಸಿದ್ದೇಶ್ವರ ಅವರು, ಮನವಿಗೆ ಸ್ಪಂದಿ ಸುತ್ತಾ, ವಿದ್ಯಾರ್ಥಿನಿಯರ ನಿಲಯ ಕ್ಕೆಂದು ದೂಡಾಗೆ ಅರ್ಜಿ ಸಲ್ಲಿಸಿದರೆ ಸಾಕಷ್ಟು ಸಿಎ ನಿವೇಶನಗಳಿದ್ದು, ಅವು ಗಳಲ್ಲಿ ಜಾಗ ನೀಡಲಾಗುವುದು. ನಿಲ ಯದ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲು ಸಿದ್ಧ ಎಂದರು.
ನಾಯಕರ ವಿದ್ಯಾರ್ಥಿ ನಿಲಯದ ಮೂಲಸೌಕರ್ಯ ಅಭಿವೃದ್ಧಿಗೆ 65.89 ಲಕ್ಷ ರೂ. ಅನುದಾನ ನಗರ ಪಾಲಿಕೆಯಿಂದ ನೀಡುತ್ತಿರುವುದು ಬೇರೆಲ್ಲೂ ಇಷ್ಟು ಹಣ ನೀಡಿಲ್ಲ, ಇಲ್ಲೇ ಮೊದಲು. ಸಮುದಾಯದ ಮಕ್ಕಳು ವಿದ್ಯಾವಂತರಾಗಿ ಸಮಾಜದ ಆಸ್ತಿಯಾಗಬೇಕು. ನಾವು ಯಾವ ಸಮಾಜಕ್ಕೂ 65 ಲಕ್ಷ ಅನುದಾನ ನೀಡಿಲ್ಲ. ಆದರೆ, ನಾಯಕ ಸಮಾಜಕ್ಕೆ ಇಷ್ಟು ಮೊತ್ತದ ಅನುದಾನ ನೀಡಿದ್ದು, ಈ ಸಮಾಜದ ಬಗ್ಗೆ ಸರ್ಕಾರಕ್ಕೆ ಇರುವ ಕಾಳಜಿಯನ್ನು ಇದು ತೋರಿಸುತ್ತದೆ ಎಂದು ತಿಳಿಸಿದರು.
ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ನಾಯಕ ಸಮುದಾಯದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ನಿಲಯದ ಅವಶ್ಯಕತೆ ಇದೆ. ಗ್ರಾಮೀಣ ಭಾಗದಿಂದ ಬಂದು ಓದುವ ವಿದ್ಯಾರ್ಥಿ ನಿಯರ ಅನುಕೂಲದ ದೃಷ್ಟಿಯಿಂದ ಸಮುದಾಯದ ವಿದ್ಯಾರ್ಥಿನಿಯರಿಗೆ ನಿಲಯಕ್ಕೆ ಅರ್ಜಿ ಸಲ್ಲಿಸಿ ನಿವೇಶನ ಪಡೆದುಕೊಳ್ಳುವಂತೆ ಹೇಳಿದರು.
ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ವಿದ್ಯೆಯೇ ದೊಡ್ಡ ಶಕ್ತಿ ಮತ್ತು ಅಸ್ತ್ರ. ಶಿಕ್ಷಣ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕೆಂಬುದೇ ಬಿಜೆಪಿ ನೇತೃತ್ವದ ಸರ್ಕಾರಗಳ ಮುಖ್ಯ ಧ್ಯೇಯ ಎಂದರು.
ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಪಾಲಿಕೆ ಸದಸ್ಯ ಕೆ. ಪ್ರಸನ್ನಕುಮಾರ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ನಾಯಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಬಿ. ವೀರಣ್ಣ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಸಮಾಜದ ಮುಖಂಡರಾದ ಹದಡಿ ಹಾಲಪ್ಪ, ಆಂಜನೇಯ ಗುರೂಜಿ, ಲಕ್ಷ್ಮಣ್, ಉಮೇಶ್ ಸೇರಿದಂತೆ ಇತರರು ಇದ್ದರು.