ರಾಣೇಬೆನ್ನೂರು-ಶಿಕಾರಿಪುರ ರೈಲು ಮಾರ್ಗ ಮುಂದಿನ ತಿಂಗಳು ಟೆಂಡರ್ : ಸಂಸದ ಬಿ.ವೈ. ರಾಘವೇಂದ್ರ

ರಾಣೇಬೆನ್ನೂರು, ಜ. 24- ಹೊಸದಾಗಿ ಯೋಜನೆ ಕೈಗೊಂಡಿರುವ ಶಿಕಾರಿಪುರ – ರಾಣೇಬೆನ್ನೂರು ರೈಲು ಮಾರ್ಗ ಕಾಮಗಾರಿಯ ಟೆಂಡರನ್ನು ಮುಂದಿನ ತಿಂಗಳು ಕರೆಯಲಾಗುವುದು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಅವರು ತಾಲ್ಲೂಕಿನ ಐರಣಿ ಹೊಳೆಮಠದಲ್ಲಿ ನಡೆದ ಶ್ರೀ ಮುಪ್ಪಿನಾರ್ಯರ ಶಿವಭಜನಾ ಸಪ್ತಾಹದ ಶತಮಾನೋತ್ಸವದ ನೆನಪಿನ ಪೂಜಾ ಮಂದಿರದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಮಾರ್ಗ ಬದಲಾವಣೆ ಮುಂತಾದವುಗಳ ಬಗ್ಗೆ ತಕರಾರು ಸಲ್ಲಿಸುವ ಕಾಲಾವಕಾಶ ಮುಗಿದಿದೆ. ಮಂಜೂರಾಗಿರುವ ನೀಲಿ ನಕ್ಷೆಯಂತೆ ಕೆಲಸ ನಡೆಯಲಿದೆ. ಈಗಾಗಲೇ 15 ನೂರು ಕೋಟಿ ಹಣ ಬಿಡುಗಡೆ ಆಗಿದ್ದು, ಸರ್ವೆ ಕಾರ್ಯ ಮುಗಿಯುವ ಹಂತ ತಲುಪಿದೆ. ತಾವು ಈ ತಿಂಗಳ ಅಂತ್ಯಕ್ಕೆ ದೆಹಲಿಗೆ ತೆರಳಲಿದ್ದು, ಆಗ ಟೆಂಡರ್ ಕರೆಯುವ ಪ್ರಕ್ರಿಯೆಗೆ ಚಾಲನೆ ದೊರಕಲಿದೆ ಎಂದು ರಾಘವೇಂದ್ರ ಹೇಳಿದರು.

ಈ ರೈಲು ಮಾರ್ಗದಿಂದ ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಯ ರೈತರಿಗೆ ಬಹಳಷ್ಟು ಉಪಯುಕ್ತವಾಗಲಿದೆ. ಈಗಾಗಲೇ ಈ ಯೋಜನೆ ಬಗ್ಗೆ ಬಹಳಷ್ಟು ಜನರು ಹರ್ಷ ವ್ಯಕ್ತಪಡಿಸಿದ್ದಾರೆ. ನಾವು ಸಹ ಮೈಕ್‌ನಲ್ಲಿ ರೈಲು ಓಡಿಸದೇ, ಅತಿ ಶೀಘ್ರದಲ್ಲಿಯೇ ಹಳಿ ಮೇಲೆ ರೈಲು ಓಡಿಸುತ್ತೇವೆ. ಈ ಯೋಜನೆ ಪೂರೈಸುವ ಬಲವಾದ ಇಚ್ಛೆ ನನ್ನದಾಗಿದೆ ಎಂದು ರಾಘವೇಂದ್ರ ಹೇಳಿದರು.

ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ನಡೆದಾಡುವ ದೇವರಿದ್ದಂತೆ. ಅವರು ಸ್ವ ಬದುಕು ತ್ಯಜಿಸಿ ಮಠಕ್ಕಾಗಿ, ಮಠದ ಭಕ್ತರಿಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಅವರು ಹೇಳಿದ ಎಲ್ಲಾ ಕಾರ್ಯಗಳಿಗೂ ನಾನು ಸ್ಪಂದಿಸಿದ್ದೇನೆ. ಮುಂದೆಯೂ ಸಹ ಅವರು ಕೈಗೊಳ್ಳುವ ಎಲ್ಲಾ ಕೆಲಸಗಳಿಗೂ ಶಕ್ತಿ ತುಂಬುತ್ತೇನೆ ಎಂದು ರಾಘವೇಂದ್ರ ಹೇಳಿದರು.

ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಮಾತನಾಡಿ, ಇಂದು ಶಿಲಾನ್ಯಾಸ ಮಾಡಿದ ಪೂಜಾ ಮಂದಿರ ನಿರ್ಮಾಣಕ್ಕೆ ನನ್ನ ಅನುದಾನದಿಂದ 10 ಲಕ್ಷ ಹಣ ಕೊಡುವುದಾಗಿ ತಿಳಿಸಿದರು. 

ಎಲ್ಲರನ್ನೂ ಸ್ವಾಗತಿಸಿದ ಮಠದ ಸಂಚಾಲಕ ಬಾಬು ಶೆಟ್ಟರ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ಹಾಗೂ ಮಠದ ಪರಂಪರೆ, ಇತಿಹಾಸ ವಿವರಿಸಿದರು.

ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಣೇಬೆನ್ನೂರು ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟೆ, ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ ಹಾಗೂ ಸದಸ್ಯರು, ಐರಣಿ ಗ್ರಾ.ಪಂ. ಅಧ್ಯಕ್ಷ ನಿಂಗಪ್ಪ ಕಳ್ಳಿಮನಿ, ಅರಣ್ಯ ಮಂಡಳಿ ನಿರ್ದೇಶಕಿ ಭಾರತಿ ಜಂಬಗಿ, ಸಾರಿಗೆ ಮಂಡಳಿ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ನಿರ್ದೇಶಕ ಸಂತೋಷ ಪಾಟೀಲ, ವಾಲ್ಮೀಕಿ ಅಭಿವೃದ್ಧಿ ನಿಗಮದ ಬಸವರಾಜ ಚಳಗೇರಿ, ಎಸ್.ಎಸ್. ರಾಮಲಿಂಗಣ್ಣನವರ, ವರ್ತಕ ಬಸವರಾಜ ಪಟ್ಟಣಶೆಟ್ಟಿ, ಜಿ.ಜಿ. ಹೊಟ್ಟಿಗೌಡ್ರ, ಸೋಮು ಗೌಡ ಶಿವಣ್ಣನವರ, ಹರಿಹರದ ಟಿ. ಮುರುಗೇಶಣ್ಣ, ನಗರಸಭೆ ಸದಸ್ಯರಾದ ಅಶ್ವಿನಿ, ಶಂಕರ ಖಟಾವಕರ್ ಉಪಸ್ಥಿತರಿದ್ದರು.

error: Content is protected !!