ಫುಟ್‌ಪಾತ್ ವ್ಯಾಪಾರಿಗಳಿಂದ ಹೆಚ್ಚು ಹಣ ವಸೂಲಿ

ಹರಿಹರದಲ್ಲಿ ಜಯಕರ್ನಾಟಕ ಸಂಘಟನೆ ಪ್ರತಿಭಟನೆ

ಹರಿಹರ, ಜ. 23- ಫುಟ್‌ಪಾತ್ ವ್ಯಾಪಾರಿಗಳಿಂದ ನಗರಸಭೆ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ನಗರದ ಜಯಕರ್ನಾಟಕ ಸಂಘಟನೆ ಪ್ರತಿಭಟನೆ ನಡೆಸಿದೆ.

ಗುತ್ತಿಗೆದಾರರಿಂದ ಹೆಚ್ಚಿನ ಹಣ ವಸೂಲಿ ನಿಯಂತ್ರಿಸುವಂತೆ ನಗರಸಭೆಯ ಪೌರಾಯುಕ್ತರಾದ ಎಸ್. ಲಕ್ಷ್ಮಿ ಮತ್ತು ಕಂದಾಯ ಅಧಿಕಾರಿಯಾದ ಮಂಜುನಾಥ್ ಅವರಿಗೆ ಸಂಘಟನೆ ಪ್ರತಿಭಟನೆ ನಡೆಸಿದ ನಂತರ ಮನವಿ ಸಲ್ಲಿಸಿದೆ.

ಈ ವೇಳೆ ಮಾತನಾಡಿದ ಜಯಕರ್ನಾಟಕ ಸಂಘಟನೆಯ ಮುಖಂಡರು, ಫುಟ್‌ಪಾತ್ ವ್ಯಾಪಾರಿಗಳಿಂದ, ದಿನವಹಿ ಸಂತೆ ಮತ್ತು ಪ್ರತಿ ಮಂಗಳವಾರ ನಡೆಯುವ ವಾರದ ಸಂತೆಯಲ್ಲಿ ನಗರಸಭೆ ವತಿಯಿಂದ ನಿಗದಿಪಡಿಸಿದ ದರಗಳನ್ನು ಪಡೆಯದೇ ಅತಿ ಹೆಚ್ಚು ದರವನ್ನು ಸಣ್ಣ-ಪುಟ್ಟ ವ್ಯಾಪಾರಿಗಳಿಂದ ವಸೂಲಿ ಮಾಡಲಾಗುತ್ತಿದೆ. ಅಳತೆಗನುಗುಣವಾಗಿ ನಿಗದಿಪಡಿಸಿದ ದರಗಳನ್ನು ವಸೂಲಿ ಮಾಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಹೆಚ್ಚುವರಿಯಾಗಿ ಪಡೆದಿರುವ ಹಣ ವಾಪಸ್  ಕೊಡಿಸಬೇಕು. ಹಣ ಸ್ವೀಕರಿಸಿದ ಬಗ್ಗೆ ರಸೀದಿ ನೀಡಲು ಮತ್ತು ನಿಗದಿಪಡಿಸಿದ ದರವನ್ನು ಬಹಿರಂಗವಾಗಿ ಧ್ವನಿವರ್ಧಕದ ಮೂಲಕ ಮತ್ತು ಕರಪತ್ರದ ಮೂಲಕ ತಿಳಿಸಿ ಅರಿವು ಮೂಡಿಸಲು ಕ್ರಮ ತೆಗೆದುಕೊಳ್ಳಬೇಕು. ಈಗ ನೀಡಿರುವ ಗುತ್ತಿಗೆಯನ್ನು ರದ್ದುಪಡಿಸಬೇಕು ಎಂದು ನಾಯಕರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಗೋವಿಂದ್, ಪ್ರಧಾನ ಕಾರ್ಯದರ್ಶಿ ಸುನಿಲ್, ಸಂಘಟನಾ ಕಾರ್ಯದರ್ಶಿ ಮಧು, ನಗರ ವಿದ್ಯಾರ್ಥಿ
ಘಟಕದ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಪ್ರವೀಣ್, ಪ್ರಧಾನ ಕಾರ್ಯದರ್ಶಿ ರಜತ್, ಸಂಘಟನಾ ಕಾರ್ಯದರ್ಶಿ ಪಾಂಡುರಂಗ, ಖಜಾಂಚಿ ಕಾರ್ತಿಕ್, ಸಹಕಾರ್ಯದರ್ಶಿ
ವೀರಭದ್ರ ಸ್ವಾಮಿ ಮತ್ತು ಮಹಾತ್ಮಗಾಂಧಿ ಆಟೋ ನಿಲ್ದಾಣದ ಅಧ್ಯಕ್ಷ ಹರೀಶ್ ಬೆಳಕೇರಿ, ಪವನ್, ರಾಘು ಕುಮಾರ್ ಮತ್ತು ಜಯಕರ್ನಾಟಕ ಆಪೆ ಆಟೋ ನಿಲ್ದಾಣದ ಅಧ್ಯಕ್ಷ ಕುಮಾರ್ ಹಾಲೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!