ನಮ್ಮೊಬ್ಬರಿಂದ ಇಡೀ ರಾಜ್ಯದಲ್ಲಿ ಸಮುದಾಯದ ಸಂಘಟನೆ ಸಾಧ್ಯವಿಲ್ಲ. ಅನೇಕ ಭಕ್ತರ ಮನೆಗಳಿಗೆ ಗೃಹ ಪ್ರವೇಶ, ಮದುವೆ ಇತರೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಸಮಯ ಸಾಕಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಆಯಾ ಭಾಗದಲ್ಲಿ ನಮ್ಮ ಸಮು ದಾಯದ ಸ್ವಾಮಿಗಳು ಇದ್ದರೆ ಅವರು ಪಾಲ್ಗೊಂಡು ಸಂಸ್ಕಾರ ಕೊಡುವ ಮೂಲಕ ಸಮಾಜ ಕಟ್ಟುವ ಸಂದೇಶ ನೀಡುತ್ತಾರೆ. ಈ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದೇವೆ. 2ಎ ಮೀಸಲಾತಿ ಹೋರಾಟ, ಪೀಠದ ಸ್ವಾಮಿಗಳಾದ ನಮ್ಮ ಕರ್ತವ್ಯ. ಸಮಾಜದ ಭಕ್ತರಿಗೆ ಶಿಕ್ಷಣ, ಉದ್ಯೋಗ ಕೊಡಿಸುವ ಕೆಲಸವನ್ನು ಸ್ವಾಮಿಗಳಾದ ವರು ಮಾಡಬೇಕು. ಅದು ಅವರ ಕರ್ತವ್ಯ.
– ಶ್ರೀ ವಚನಾನಂದ ಸ್ವಾಮೀಜಿ
ಮತಾಂತರ ತಡೆ, ಸಂಸ್ಕಾರಕ್ಕಾಗಿ ಮೂರನೇ ಪಂಚಮಸಾಲಿ ಪೀಠ: ವಚನಾನಂದ ಶ್ರೀ
ಹರಿಹರ, ಜ.23 – ಪಂಚಮಸಾಲಿ ಸಮುದಾಯದ ಭಕ್ತರು ಮತಾಂತರ ಆಗುತ್ತಿರುವುದನ್ನು ತಡೆಯಲು ಮತ್ತು ಜಮಖಂಡಿ ಭಾಗದಲ್ಲಿ ಪಂಚಮಸಾಲಿ ಸಮಾಜದ ಭಕ್ತರಿಗೆ ಧಾರ್ಮಿಕ, ಸಾಮಾಜಿಕ, ಅಧ್ಯಾತ್ಮಿಕ ಸಂಸ್ಕಾರ ಕೊಡಲು ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆಗೆ ನಾವು ಸಂಪೂರ್ಣ ಸಹಕಾರ ಕೊಡುವುದಾಗಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ವಚನಾನಂದ ಶ್ರೀಗಳು ಹೇಳಿದರು.
ನಗರದ ಪಂಚಮಸಾಲಿ ಪೀಠದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಪಂಚಮಸಾಲಿ ಸಮುದಾಯದ ಅನೇಕ ಭಕ್ತರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುತ್ತಿದ್ದಾರೆ. ಅದನ್ನು ತಡೆಯಲು ಫೆ.14ರಂದು ಮೂರನೇ ಪಂಚಮಸಾಲಿ ಪೀಠದ ಸ್ಥಾಪಿಸಲಾಗುತ್ತಿದೆ ಎಂದು ಮೊನ್ನೆ ನಡೆದ ಸಾಂಕೇತಿಕ ಹರ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸಂದರ್ಭದಲ್ಲಿ ಶ್ರೀ ಬಬಲೇಶ್ವರ ಪೀಠದ ಶ್ರೀ ಮಹದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಮನಗೂಳಿ ಶ್ರೀ ಅಭಿನವ ಸಂಗನಬಸವ ಮಹಾಸ್ವಾಮಿಗಳು ತಿಳಿಸಿದ್ದಾರೆ ಎಂದರು.
ನಮಗೆ ಹರಿಹರ ಪಂಚಮಸಾಲಿ ಪೀಠ ಮೂಲ ಪೀಠ ಎಂದವರು ಸ್ಪಷ್ಟವಾಗಿ ಹೇಳಿದ್ದಾರೆ. ನಾವು ನೀವು ಬೇರೆ ಅಲ್ಲ, ಎಲ್ಲರೂ ಸೇರಿ ಸಮಾಜ ಸಂಘಟನೆ ಮಾಡಿ ಸಮಾಜಕ್ಕೆ ಸಂಸ್ಕಾರ ಕೊಡೋಣ. ಅದಕ್ಕೆ ನಿಮ್ಮ ಸಹಕಾರ ಬೇಕು ಎಂದು ಕೇಳಿದಾಗ ನಮ್ಮ ಕಡೆಯಿಂದ ಸಂಪೂರ್ಣ ಸಹಕಾರ ಕೊಡುವುದಾಗಿ ಹೇಳಿದ್ದೇವೆ. ಅಂದು ನಡೆಯುವ ಸಮಾರಂಭಕ್ಕೆ ನಾನು ಮತ್ತು ಇಲ್ಲಿನ ಅನೇಕ ಗಣ್ಯರು ತೆರಳಿ ಯಶಸ್ವೀ ಮಾಡುವುದಾಗಿ ಹೇಳಿದರು.
ಪ್ರತಿ ಜಿಲ್ಲೆಗೊಂದು ಪೀಠ ಆಗಲೂ ಅಭ್ಯಂತರವಿಲ್ಲ. ಪೀಠಗಳು ಹೆಚ್ಚಾದರೆ ಮಠಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆ ಆಗುತ್ತದೆ ಎಂಬ ಭೀತಿ ನಮಗಿಲ್ಲ. ರಾಜ್ಯದಲ್ಲಿ ಸುಮಾರು 2000 ಮಠಗಳಿವೆ. ಮಠಗಳಿಗೆ ಹೆಚ್ಚು ದಾನ ನೀಡಿರುವುದು ಪಂಚಮಸಾಲಿ ಭಕ್ತರು ಎಂದವರು ಹೇಳಿದರು.
ಸಚಿವ ಮುರುಗೇಶ್ ನಿರಾಣಿ ನಾವು ಪೀಠಕ್ಕೆ ಬರುವುದಕ್ಕಿಂತ ಮುಂಚಿತವಾಗಿ ಪೀಠದ ಭಕ್ತರಾಗಿದ್ದರು. ಅವರ ಕೊಡುಗೆ ಪೀಠಕ್ಕೆ ಅಪಾರ. ಅವರ ಅದೃಷ್ಟದಲ್ಲಿ ಇದ್ದರೆ ಮುಖ್ಯಮಂತ್ರಿ ಆಗುತ್ತಾರೆ. ಅವರು ಪಂಚಮಸಾಲಿ ಸಮುದಾಯದ 75 ಸಾವಿರ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಅವರು ಮುಖ್ಯಮಂತ್ರಿಯಾದರೆ ನಮ್ಮ ಸಮುದಾಯದ ಹೆಮ್ಮೆ ಎಂದರು.
2ಎ ಮೀಸಲಾತಿಗೆ 1994 ರಿಂದ ರಾಜ್ಯ ಸಂಘ ಹೋರಾಟ ಮಾಡುತ್ತಾ ಬಂದಿದೆ. ಇತ್ತೀಚಿಗೆ ಕೇಂದ್ರ ಹಿಂದುಳಿದ ಆಯೋಗವನ್ನು ಭೇಟಿ ಮಾಡಿ ಮತ್ತು ಮೀಸಲಾತಿ ನ್ಯಾಯ ಮಂಡಳಿ ಜೊತೆಗೆ ಚರ್ಚೆ ಮಾಡಿ 1871 ರಿಂದ ಇಲ್ಲಿಯವರೆಗಿನ ದಾಖಲೆಗಳನ್ನು ಒದಗಿಸಲಾಗಿದೆ. ಜಯಪ್ರಕಾಶ್ ಹೆಗಡೆ ಆಯೋಗವನ್ನು ಭೇಟಿ ಮಾಡಿ ಸುಮಾರು 6 ಗಂಟೆಗಳ ಕಾಲ ವಾದ ಮಂಡಿಸಲಾಗಿದೆ. ಇದರ ಜೊತೆಗೆ ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ನಿಕಟ ಪೂರ್ವ ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜ್ ದಿಂಡೂರು ಮಾತನಾಡಿ, ಪಂಚಮಸಾಲಿ ಸಮಾಜದ ಮೂರನೇ ಪೀಠದ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ನಿರಾಣಿ ತೇಜೋವಧೆ ಮಾಡುವುದು ಸೂಕ್ತವಲ್ಲ. ಇದರಿಂದಾಗಿ ಸಮಾಜದಲ್ಲಿನ ಸಾಮರಸ್ಯ ಭಾವನೆಗೆ ದಕ್ಕೆ ಬರುತ್ತದೆ ಎಂದರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ತಾಕತ್ತು ಇದ್ದರೆ ನಿರಾಣಿ ಅವರಂತೆ ಕೆಲಸ ಮಾಡಿ ತೋರಿಸಲಿ. ಅದನ್ನು ಬಿಟ್ಟು ಪೇಪರ್ ಹೇಳಿಕೆ ಕೊಟ್ಟು ಪೇಪರ್ ಹುಲಿಯಾಗಬಾರದು ಎಂದರು.
2030 ರ ಸಂಕ್ರಾಂತಿ ವೇಳೆಗೆ ಜಿಲ್ಲೆಗೊಂದು ಪಂಚಮಸಾಲಿ ಪೀಠ ಸ್ಥಾಪನೆಯಾಗುತ್ತವೆ ಎಂದೂ ಅವರು ತಿಳಿಸಿದ್ದಾರೆ.
ರಾಜ್ಯ ಪಂಚಮಸಾಲಿ ಸಮಾಜದ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮಿಗಳು ಮಾಡುವ ಹೋರಾಟ ಉತ್ತಮವಾಗಿಯೇ ಇರುತ್ತವೆ. ಆದರೆ, ಅವರು ಯಾವುದನ್ನು ಪೂರ್ಣವಾಗಿ ಮುಗಿಸಿಲ್ಲ. ಮಹದಾಯಿ ಹೋರಾಟ, 2 ಎ ಮೀಸಲಾತಿ, ಲಿಂಗಾಯತ ಧರ್ಮದ ಹೋರಾಟ ಇವುಗಳನ್ನು ಅರ್ಧಕ್ಕೆ ನಿಲ್ಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಿರಾಣಿ ಅವರನ್ನೂ ಮೂಲೆಗುಂಪು ಮಾಡಲು ಹೊರಟರೆ ಮೂಲ ಪಂಚಮಸಾಲಿ ಪೀಠದ ಭಕ್ತರು ಬೀದಿಗೆ ಇಳಿದು ಹೋರಾಟ ಮಾಡುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.