ಹಿಂದೆಂದೂ ಆಗದ ಅಭಿವೃದ್ಧಿಯಾಗಿದೆ

2.75 ಕೋ. ವೆಚ್ಚದಲ್ಲಿ ಟಿ.ವಿ. ಸ್ಟೇಷನ್ ಕೆರೆ ಅಭಿವೃದ್ಧಿಗೆ ಚಾಲನೆ ನೀಡಿದ ಸಿದ್ದೇಶ್ವರ್

ದಾವಣಗೆರೆ, ಜ.21- ಹಿಂದೆಂದೂ ಆಗದಂತಹ ಅಭಿವೃದ್ಧಿ ಕಾರ್ಯಗಳು ನಗರದಲ್ಲಿ ಇದೀಗ ನಮ್ಮ ಬಿಜೆಪಿ ಆಡಳಿತಾವಧಿಯಲ್ಲಿ ನಗರ ಪಾಲಿಕೆ, ದೂಡಾ ಮತ್ತು ಸ್ಮಾರ್ಟ್ ಸಿಟಿ ಯೋಜನೆಯಡಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ    ಎಂದು ಸಂಸದ  ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ನಗರದ ಟಿ.ವಿ. ಸ್ಟೇಷನ್ ಕೆರೆಯಲ್ಲಿ ದೂಡಾದಿಂದ 2.75 ಕೋಟಿ ರೂ. ವೆಚ್ಚದಲ್ಲಿ ಟಿವಿ ಸ್ಟೇಷನ್ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಗರ ಪಾಲಿಕೆ, ದಾವಣಗೆರೆ-ಹರಿಹರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈ ವೇಳೆಯಲ್ಲಿ ಸ್ಮಾರ್ಟ್‍ಸಿಟಿ ಯೋಜನೆ ಮತ್ತು ಸರ್ಕಾರದ ಸಾವಿರಾರು ಕೋಟಿ ಅನುದಾನದಲ್ಲಿ ಅಭಿವೃದ್ಧಿ ಪರ್ವವನ್ನು ಮಾಡುತ್ತಿದ್ದೇವೆ. ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಕೆರೆಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ನಾನು ಮತ್ತು ರವೀಂದ್ರನಾಥ್ ಅವರು ಹಿಂದೆ ಭೇಟಿ ನೀಡಿದ್ದಾಗ, ಟಿ.ವಿ. ಸ್ಟೇಷನ್ ಕೆರೆಯಲ್ಲಿ ಕೆಲ ಮೂಲಭೂತ ವ್ಯವಸ್ಥೆಗಳ ಕೊರತೆ ಕಾಣುತ್ತಿದ್ದವು.ಈ ಕೆರೆಯ ಅಭಿವೃದ್ಧಿಗಾಗಿ ಇದೀಗ ಚಾಲನೆ ಸಿಕ್ಕಿದ್ದು, ವಾಕಿಂಗ್ ಪಾಥ್, ಆಸನದ ವ್ಯವಸ್ಥೆ, ದೀಪದ ಬೆಳಕಿನ ವ್ಯವಸ್ಥೆ, ಗಿಡಗಳ ಬೆಳೆಸುವುದೂ ಸೇರಿದಂತೆ 2.75 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಣಲಿದೆ. ಇದಕ್ಕೆ ಪಾಲಿಕೆ ಮತ್ತು ದೂಡಾ ಆಯುಕ್ತರು ಇಬ್ಬರು ಸೇರಿ ಗುಣಮಟ್ಟದ ಕಾಮಗಾರಿ ಕೈಗೊಂಡು ಕೆರೆ ಅಭಿವೃದ್ಧಿಪಡಿಸಬೇಕು. ಕೆರೆಯ ಆಳ ಕಡಿಮೆ ಇದೆ. ಇಲ್ಲಿರುವ ನೀರನ್ನು ಯಾವುದೇ ಕಾರಣಕ್ಕೂ ಖಾಲಿ ಮಾಡಬಾರದು. ಆಕಸ್ಮಾತ್ ಖಾಲಿ ಮಾಡಿದರೆ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಆಗುತ್ತದೆ. ಹಾಗಾಗಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕೆರೆಯ ಹೂಳೆತ್ತುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ನಗರಪಾಲಿಕೆ ವ್ಯಾಪ್ತಿಯಲ್ಲಿನ ನಗರದ ರಸ್ತೆಗಳು, ಚರಂಡಿ ಮತ್ತಿತರೆ ಕಾಮಗಾರಿಗಳಿಗೆ 125 ಕೋಟಿ ರೂ. ಅನುದಾನದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ. ದೂಡಾದಿಂದಲೂ ಸಹ ರಸ್ತೆ, ಉದ್ಯಾನವನ ಅಭಿವೃದ್ಧಿ ಮಾಡಲಾಗುತ್ತಿದೆ. ಉತ್ತರ-ದಕ್ಷಿಣ ಭಾಗದ ಸಮಗ್ರ ಅಭಿವೃದ್ಧಿ ಕಾಮಗಾರಿ ಸಾಗಿದೆ. ನಗರ ಪಾಲಿಕೆಗೆ 40 ಕೋಟಿ ಅನುದಾನ ಬರಲಿದ್ದು, ಶಾಸಕ ಎಸ್.ಎ. ರವೀಂದ್ರನಾಥ್ ಅವರ 50 ಕೋಟಿ ರೂ. ಎರಡೂ ಅನುದಾನ ಬಳಸಿ ನಗರದ ಕಚ್ಚಾ ರಸ್ತೆಗಳನ್ನು ಸುವ್ಯವಸ್ಥಿತ ರಸ್ತೆಗಳನ್ನಾಗಿ ಮಾಡಲಾಗುವುದು ಎಂದರು.

ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿದರು. ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಉಪ ಮೇಯರ್ ಶಿಲ್ಪ ಜಯಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಡಿ.ಎಸ್. ಉಮಾ ಪ್ರಕಾಶ್, ಆಯುಕ್ತ ವಿಶ್ವನಾಥ ಪಿ. ಮುದಜ್ಜಿ, ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ದೂಡಾ ಮಾಜಿ ಅಧ್ಯಕ್ಷರುಗಳಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ್, ದೂಡಾ ಸದಸ್ಯರಾದ ಮಹಾಂತೇಶ ಘಾಟ್ಗೆ, ಬಾತಿ ಚಂದ್ರಶೇಖರ್, ಆರ್. ಲಕ್ಷ್ಮಣ, ಗೌರಮ್ಮ ಪಾಟೀಲ್, ಪಾಲಿಕೆ ಸದಸ್ಯರಾದ ಕೆ.ಎಂ. ವೀರೇಶ್, ಗಾಯತ್ರಿ ಬಾಯಿ ಸೇರಿದಂತೆ ಇತರರು ಇದ್ದರು.

error: Content is protected !!