ರೈಲ್ವೆ ಗೇಟ್ ಸಮಸ್ಯೆ ಪರಿಹಾರಕ್ಕೆ ಅಂಡರ್ ಪಾಸ್

ದಾವಣಗೆರೆ, ಜ. 20- ಅಶೋಕ ಚಿತ್ರಮಂದಿರದ ರೈಲ್ವೆ ಗೇಟ್ ಸಮಸ್ಯೆ ಕಳೆದ ನಾಲ್ಕೈದು ದಶಕಗಳ ಸಮಸ್ಯೆ. ಇದನ್ನು ಪರಿಹರಿಸಲು ಏನೇನು ಅವಕಾಶವಿದೆಯೋ ಎಲ್ಲವನ್ನು ಬಳಸಿಕೊಂಡು ಈ ಸಮಸ್ಯೆಗೆ ಮುಕ್ತಿ ನೀಡಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ತಿಳಿಸಿದರು. 

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ನಾಲ್ಕೈದು ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲು  ಇಲ್ಲಿರುವ ರೈಲ್ವೆ ಹಳಿಗೆ ಸಮಾನಾಂತರವಾಗಿ ಅಶೋಕ ಚಿತ್ರಮಂದಿರದ ರಸ್ತೆಯಿಂದ ಈರುಳ್ಳಿ ಮಾರ್ಕೆಟ್ ಸೇತುವೆಯವರೆಗೆ 60 ಅಡಿ ರಸ್ತೆ ನಿರ್ಮಾಣ ಮಾಡಬೇಕಾಗಿದ್ದು ರಸ್ತೆಯನ್ನು ಮಹಾನಗರಪಾಲಿಕೆ ಅಥವಾ ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಮಾಡಿಕೊಡಲಾಗುವುದು ಎಂದು ಹೇಳಿದರು. ಇದಕ್ಕೂ ಮುನ್ನ ಕೆಳಸೇತುವೆ ನಿರ್ಮಾಣವಾದರೆ ಸೇತುವೆಗೆ ಸಂಪರ್ಕ ಕಲ್ಪಿಸಲು ರೈಲ್ವೆ ಹಳಿಯ ಇನ್ನೊಂದು ಮಗ್ಗಲಲ್ಲಿ ಸಮಾನಾಂತರ ರಸ್ತೆ ನಿರ್ಮಾಣ ಮಾಡಬೇಕಾಗುತ್ತದೆ ಎನ್ನುವ ವಿಷಯ ಸಭೆಯಲ್ಲಿ ಚರ್ಚೆಗೆ ಬಂದಿತು. ಸಮಾನಾಂತರ ರಸ್ತೆ ನಿರ್ಮಾಣ ಮಾಡಲು ಅಲ್ಲಿ ಖಾಸಗಿ ಜಮೀನನ್ನು ಬಳಸಿಕೊಂಡು ರಸ್ತೆ ನಿರ್ಮಾಣ ಮಾಡಬೇಕಾಗುತ್ತದೆ. ಖಾಸಗಿ ಜಮೀನನ್ನು ಸ್ವಾಧೀನಪಡಿಸಿಕೊಂಡು ಮಾಲೀಕರಿಗೆ ಪರಿಹಾರ ನೀಡಲು ಈ ಯೋಜನೆಯಡಿ ಯಾವುದೇ ಅವಕಾಶ ಇಲ್ಲ ಎನ್ನುವ ವಿಷಯವನ್ನೂ ಸಹ ಮಾಲೀಕರಿಗೆ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. 

ನಾಳೆಯೇ ಅಲ್ಲಿರುವ ಖಾಸಗಿ ಜಮೀನಿನ ಮಾಲಿಕರ ಸಭೆ ಕರೆದು ಸಮಾನಾಂತರ ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡುವಂತೆ ಮಾಲಿಕರ ಮನವೊಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಬೆಂಗಳೂರಿನ ರೈಲ್ವೆ ಇಲಾಖೆ ಡೆಪ್ಯುಟಿ ಚೀಫ್ ಇಂಜಿನಿಯರ್ ದೇವೇಂದ್ರಗುಪ್ತ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಶ್ರೀಧರ್ ಮೂರ್ತಿ, ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ. ರಿಷ್ಯಂತ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ದೂಡಾ ಆಯುಕ್ತ ಕುಮಾರಸ್ವಾಮಿ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!