ಹರಿಹರ ಪೀಠ ಪಂಚಮಸಾಲಿಗಳ ಧರ್ಮಕ್ಷೇತ್ರ

ಹರಿಹರ, ಜ.18- ಪಂಚಮಸಾಲಿ ಜಗದ್ಗುರು ಪೀಠಕ್ಕೆ ಆಗಮಿಸಿದ್ದ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಬಬಲೇಶ್ವರ ಬೃಹನ್ಮಠದ ಡಾ. ಶ್ರೀ ಮಹಾದೇವ ಶಿವಾಚಾರ್ಯ ಸ್ವಾಮೀಜಿ ನೇತೃತ್ವದ ಸ್ವಾಮೀಜಿಗಳ ತಂಡ, ಪೀಠದ ಬಗ್ಗೆ ಶ್ಲ್ಯಾಘನೆ ವ್ಯಕ್ತಪಡಿಸುವ ಮೂಲಕ ಹರಿಹರ ಪೀಠ ಪಂಚಮಸಾಲಿಗಳ ಧರ್ಮಕ್ಷೇತ್ರವೆಂದು ಘೋಷಿಸಿದರು.

ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಶನಿವಾರ ನಡೆದ ‘ಮಕರ ಸಂಕ್ರಾಂತಿ ಸಂಭ್ರಮ’ ಕಾರ್ಯಕ್ರಮದಲ್ಲಿ ಬಬಲೇಶ್ವರ ಶ್ರೀಗಳು, ಶಿರಸಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಮನಗೂಳಿ ಹಿರೇಮಠದ ಶ್ರೀ ಅಭಿನವ ಸಂಗನಬಸವ ಸ್ವಾಮೀಜಿ ಸೇರಿದಂತೆ, ನಾನಾ ಮಠಾಧೀಶರು ಭಾಗವಹಿಸಿದ್ದರು. 

ಇದೇ ವೇಳೆ ಮುಂದಿನ ದಿನಗಳಲ್ಲಿ ಸ್ಥಾಪನೆಯಾಗುವ ಪಂಚಮಸಾಲಿ ಮಠಗಳು ಹರಿಹರ ಜಗದ್ಗುರು ಪೀಠದ ಸಮಾನ ಚಿಂತನೆ ಹಾಗೂ ಸಂಘಟನೆ ಆದರ್ಶಗಳನ್ನು ಪಾಲಿಸಬೇಕು ಎಂಬ ಮಹತ್ವದ ನಿರ್ಧಾರವನ್ನು ಶ್ರೀಗಳು ಕೈಗೊಂಡರು.

ಶ್ರೀಗಳು ಪ್ರೇರಣಾ ಶಕ್ತಿ: ಈ ವೇಳೆ ಆಶೀರ್ವಚನ ನೀಡಿದ ಬಬಲೇಶ್ವರ ಬೃಹನ್ಮಠದ ಡಾ. ಶ್ರೀ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಪಂಚಮಸಾಲಿ ಸಮುದಾಯದ ಧರ್ಮಕ್ಷೇತ್ರ ಎಂದು ಯಾವುದನ್ನಾದರು ಕರೆಯುವುದಾದರೆ ಅದು ಹರಿಹರದ ಪೀಠವನ್ನು ಮಾತ್ರ ಎಂದರು. ಹಾಗೇ, ತಾವೊಬ್ಬರೇ ಬೆಳೆಯಬೇಕು ಎಂಬ ಆಲೋಚನೆ ಬಹಳಷ್ಟು ಸ್ವಾಮೀಜಿಗಳಿಗೆ ಇದೆ. ಆದರೆ, ತಮ್ಮೊಂದಿಗೆ ಎಲ್ಲರನ್ನೂ ಕರೆದುಕೊಂಡು ಒಟ್ಟಾಗಿ ಬೆಳೆಯಬೇಕು ಎಂಬುದು ಶ್ರೀ ವಚನಾನಂದ ಸ್ವಾಮಿಗಳ ಮನೋಭಾವ. ಸಮುದಾಯಕ್ಕೆ ಅವರೊಬ್ಬ ಪ್ರೇರಣಾ ಶಕ್ತಿಯಾಗಿದ್ದು, ಅವರ ಪ್ರೇರಣೆಯಿಂದ ನಮ್ಮ ಸಮುದಾಯ ಮಾತ್ರವಲ್ಲದೆ, ಅನ್ಯ ಸಮುದಾಯದ ದಾನಿಗಳೂ ಮಠದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಮನಗೂಳಿ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ಗುಬ್ಬಿಯ ಭೃಂಗೇಶ್ವರ ಪೀಠದ ಜಗದ್ಗುರು ಶ್ರೀ ಭೃಂಗೇಶ್ವರ ಸ್ವಾಮೀಜಿ, ಸಿದ್ದರಹಳ್ಳಿ ಪಾರಮಾರ್ಥಿಕ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅಮರಗೋಳ ರಾಮಲಿಂಗೇಶ್ವರ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಅಲಗೂರು ದರಿದೇವರ ಮಠದ ಶ್ರೀ ಶಾಂತಮೂರ್ತಿ ಲಕ್ಷ್ಮಣ ಮುತ್ಯಾ, ದೇವ ಪಟ್ಟದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!