ಸರಳವಾಗಿಯಾದರೂ ಅರ್ಥಪೂರ್ಣ ಗಣರಾಜ್ಯೋತ್ಸವಕ್ಕೆ ಜಿಲ್ಲಾಡಳಿತದ ನಿರ್ಧಾರ

ದಾವಣಗೆರೆ, ಜ.18 –  ಇದೇ ದಿನಾಂಕ 26 ರಂದು ಜಿಲ್ಲಾ ಕೇಂದ್ರದಲ್ಲಿ 73 ನೇ ಗಣ ರಾಜ್ಯೋತ್ಸವ ದಿನಾಚರಣೆಯನ್ನು ಸರಳವಾಗಿ ಯಾದರೂ ಅರ್ಥಪೂರ್ಣವಾಗಿ ಆಚರಿಸಲಾಗು ವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಹೇಳಿದ್ದಾರೆ.

ಗಣರಾಜ್ಯೋತ್ಸವ ಆಚರಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೂರ್ವಸಿದ್ದತಾ ಸಭೆಯಲ್ಲಿ ಭಾಗವಹಿಸಿ, ಅವರು ಮಾತನಾಡುತ್ತಿದ್ದರು.

ಕೊರೊನಾ ಕಾರಣದಿಂದಾಗಿ ಈ ವರ್ಷವೂ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಇದೇ ದಿನಾಂಕ 26ರ ಬುಧವಾರ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಲಿದೆ. ಎಲ್ಲಾ ಇಲಾಖಾ ಮುಖ್ಯಸ್ಥರು ತಮ್ಮ ತಮ್ಮ ಕಚೇರಿಗಳಲ್ಲಿ ನಿಯಮಾನುಸಾರ ಧ್ವಜಾರೋಹಣ ನೆರೆವೇರಿಸಿ, ಬೆಳಿಗ್ಗೆ 8.30 ಗಂಟೆಯೊಳಗಾಗಿ ಕ್ರೀಡಾಂಗಣದಲ್ಲಿ ಹಾಜರಿರಬೇಕು ಎಂದವರು ತಿಳಿಸಿದರು.

ಶಾಲಾ ಮಕ್ಕಳು ಅಥವಾ ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ.  ಆದರೆ, ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದರು.

ಪಥ ಸಂಚಲನದಲ್ಲಿ ಪೊಲೀಸ್, ಅರಣ್ಯ, ಅಗ್ನಿಶಾಮಕ ಇಲಾಖೆಗಳ ಜೊತೆಗೆ ಗೃಹರಕ್ಷಕ ದಳದ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಳ್ಳ ಲಿವೆ.  ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಅಸಾಧಾರಣ ಸಾಧನೆ ಮಾಡಿದ ಜಿಲ್ಲೆಯ ಮಕ್ಕಳಿಗೆ ಸರ್ಕಾರದಿಂದ ನೀಡಲಾಗುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಅಲ್ಲದೆ, ಕೃಷಿಯಲ್ಲಿ ಉತ್ತಮ ಸಾಧನೆಗೈದ ರೈತರಿಗೆ ಕೃಷಿ ಇಲಾಖೆಯಿಂದ ನೀಡಲಾಗುವ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ನೀಡಿ ಸನ್ಮಾನಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಮಾತನಾಡಿ, ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ಪ್ರಮುಖ ಖಾಸಗಿ ಕಚೇರಿಗಳ ಮೇಲೆ ಜ.25 ಮತ್ತು 26 ರಂದು ವಿದ್ಯುತ್ ದೀಪಾಲಂಕಾರ ಮಾಡಿಸಬೇಕು.  ಧ್ವಜ ಸಂಹಿತೆ ಕುರಿತಂತೆ ಜ. 24 ರಂದು ದಾವಣಗೆರೆಯ ಡಿ.ಆರ್. ಕಚೇರಿ ಆವರಣದಲ್ಲಿ ಸೇವಾದಳದ ವತಿಯಿಂದ ಎಲ್ಲ ಇಲಾಖೆಗಳಿಗೆ ತರಬೇತಿ ಏರ್ಪಡಿಸಲಾಗಿದೆ ಎಂದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ, ಉಪವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ ಕೌಸರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಜಿ. ನಜ್ಮಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!