ಸಮಗಾರ ಸಮಾಜದವರಿಗೆ ನಿವೇಶನ ನೀಡಲು ಕ್ರಮ : ಶಾಸಕ ರಾಮಪ್ಪ ಭರವಸೆ

ಹರಿಹರ, ಜ.18- ಬಡ ಕುಟುಂಬಗಳ ಏಳಿಗೆಗಾಗಿ ರಾಜ್ಯ ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ  ಮಾಡಿಕೊಳ್ಳುವಂತೆ ಶಾಸಕ ಎಸ್. ರಾಮಪ್ಪ ಕರೆ ನೀಡಿದ್ದಾರೆ.

ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಕೌಶಲ್ಯ ಅಭಿವೃದ್ಧಿ ಮತ್ತು ಆದಾಯ ಗಳಿಕೆಗಾಗಿ ತರಬೇತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ತರಬೇತಿ ಮತ್ತು ಹರಳಯ್ಯ ಸಮಗಾರ ಸಮಾಜದ ಕುಟುಂಬಗಳಿಗೆ 30 ರಾಟಿ ಯಂತ್ರಗಳ ವಿತರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಸಣ್ಣ ವ್ಯಾಪಾರ ಸರಿಯಾದ ರೀತಿಯಲ್ಲಿ ಮಾಡಿದರೆ ಅದು ದೊಡ್ಡ ಪ್ರಮಾಣದಲ್ಲಿ ಸಾಗಿ ಉತ್ತಮ ಫಲವನ್ನು ನೀಡುತ್ತದೆ. ನಾನು ಚೆನ್ನಾಗಿ ಸಮಾಜದಲ್ಲಿ ಬಾಳಬೇಕು ಎಂಬ ಛಲವನ್ನು ಸಮಗಾರ ಸಮಾಜದವರು ಹೊಂದಬೇಕು ಎಂದವರು ಕಿವಿಮಾತು ಹೇಳಿದರು.

ನಗರಸಭೆಯ ಸದಸ್ಯರ ಜೊತೆಯಲ್ಲಿ ಮಾತನಾಡಿ, ಸಮಗಾರ ಸಮಾಜಕ್ಕೆ ಮನೆಗಳ ನಿರ್ಮಾಣ ಮಾಡುವುದಕ್ಕೆ ಜಾಗ ನೀಡುವುದಕ್ಕೆ ಮುಂದಾಗುವುದಾಗಿ ಹೇಳಿದರು.

ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ  ಪ್ರೊ. ಲಿಂಗಪ್ಪ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಹಣ ಗಳಿಕೆ ಮಾಡುವುದಕ್ಕೆ ನಮ್ಮಲ್ಲಿ ಅನೇಕ ಯೋಜನೆಗಳು ಇವೆ. ಇವುಗಳನ್ನು ಸದ್ಭಳಕೆ ಮಾಡಿಕೊಳ್ಳಿ. ಸಹಾಯಧನ, ಕಿಟ್, ತರಬೇತಿ ನೀಡುತ್ತಿರುವುದು ಉತ್ತಮವಾಗಿ ಉಪಯೋಗಿಸಿಕೊಳ್ಳಿ ಎಂದು ಕರೆ ನೀಡಿದರು. 

ಸ್ಥಳೀಯ ಶಾಸಕರು ಮೂರು ಎಕರೆ ಜಮೀನು ನೀಡಿದರೆ ಇಲ್ಲಿನ ಸಮಗಾರ ಜನಾಂಗದ ಬಡವರಿಗೆ ಮನೆಕಟ್ಟುವುದಕ್ಕೆ ಸಿದ್ಧನಿರುವುದಾಗಿ ಹೇಳಿದರು. 

 ಜಿಲ್ಲೆಯ ಚರ್ಮ ಕೌಶಲ್ಯ ಅಭಿವೃದ್ಧಿ ಅಧಿಕಾರಿ ರುದ್ರೇಶ್ ಮಾತನಾಡಿ, ಚರ್ಮ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆ ವತಿಯಿಂದ ಸಾಲ ಸೌಕರ್ಯಗಳನ್ನು ನೀಡಲಾಗುತ್ತದೆ. ಮಾನವ ಸಂಪನ್ಮೂಲ ತರಬೇತಿಯಲ್ಲಿ ಮಕ್ಕಳಿಗೆ ಹೆಚ್ಚು ತರಬೇತಿ ನೀಡಲಾಗುತ್ತದೆ. ವಿವಿಧ ಹಂತಗಳಲ್ಲಿ ಸಾಲ ನೀಡಲಾಗುವುದು. ಅದರಲ್ಲಿ ಸಹಾಯಧನ ಸೌಲಭ್ಯಗಳನ್ನು ನೀಡಲಾಗುತ್ತದೆ ಮತ್ತು ಮಾರುಕಟ್ಟೆ ಸಹಾಯ ಯೋಜನೆ ರೂಪದಲ್ಲಿ ಸಹಾಯ ನೀಡಲಾಗುತ್ತದೆ ಎಂದು ಹೇಳಿದರು.

ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿದರು. 

ಸಮಗಾರ ಸಮಾಜದ ಅಧ್ಯಕ್ಷ ರಮೇಶ್ ಮಾನೆ ಮಾತನಾಡಿ, ನಮಗೆ ರಸ್ತೆಯಲ್ಲಿ ಕೆಲಸ ಮಾಡಲಿಕ್ಕೆ ಫುಟ್ ಪಾತ್ ಸಮಸ್ಯೆ ಇದೆ. ಕಾಯಕ ಮಾಡುವುದಕ್ಕೆ ಒಂದು ಸ್ಥಳ ನಿಗದಿ ಮಾಡಬೇಕು ಮತ್ತು ಸಮಗಾರ ಸಮಾಜದಲ್ಲಿ ಹೆಚ್ಚು ಬಡವರಿದ್ದು, ಮನೆ ನೀಡುವುದಕ್ಕೆ ಆದ್ಯತೆ ಕೊಡಿ ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯ ಕ್ಷರಾದ ರತ್ನ ಡಿ. ಉಜ್ಜೇಶ್, ನಾಗರಾಜ್ ಜಮ್ನಹಳ್ಳಿ, ಬಿ. ಮುಗ್ದುಂ, ನಾಗರತ್ನ, ಪ್ರೀತಂ ಬಾಬು ಉಪಸ್ಥಿತರಿದ್ದರು.

error: Content is protected !!