ಟೆಸ್ಟ್, ಬೂಸ್ಟರ್ ಡೋಸ್ ಹೆಚ್ಚಿಸಲು ಗಡುವು

ಮೂರನೇ ಅಲೆ ಎದುರಿಸಲು ಆಸ್ಪತ್ರೆಗಳನ್ನು ಸನ್ನದ್ಧವಾಗಿರಿಸಲು ಸಚಿವ ಭೈರತಿ ಸೂಚನೆ

ದಾವಣಗೆರೆ, ಜ. 12 – ಕೊರೊನಾ ಟೆಸ್ಟ್ ಹೆಚ್ಚಿಸಿ, ಲಸಿಕೆ ಚುರುಕುಗೊಳಿಸಿ, ಹೊರಗಿನಿಂದ ಬರುವವರ ಮೇಲೆ ನಿಗಾ ಇಡುವ ಜೊತೆಗೆ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಸನ್ನದ್ಧವಾಗಿಟ್ಟುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೊರೊನಾ ಮೂರನೇ ಅಲೆ ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಬೂಸ್ಟರ್ ಲಸಿಕೆ ಪ್ರಮಾಣ ಶೇ.33ರ ಹಂತದಲ್ಲಿದೆ. 11 ಸಾವಿರ ಜನರಲ್ಲಿ 4 ಸಾವಿರ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಜ. 20ರಂದು ತಾವು ಮತ್ತೊಂದು ಸಭೆ ನಡೆಸುವಷ್ಟರಲ್ಲಿ ಅರ್ಹ ಎಲ್ಲರಿಗೂ ಬೂಸ್ಟರ್ ಲಸಿಕೆ ಕೊಟ್ಟಿರಬೇಕು ಎಂದು ಗಡುವು ನೀಡಿದರು.

ಎರಡನೇ ಡೋಸ್ ಚುರುಕುಗೊಳಿಸುವ ಜೊತೆಗೆ, ಮಕ್ಕಳ ಲಸಿಕೆಗೂ ತ್ವರಿತ ಕ್ರಮ ತೆಗೆದುಕೊಳ್ಳಬೇಕು. ವಾರದೊಳಗೆ ಅರ್ಹ ಎಲ್ಲರಿಗೂ ಲಸಿಕೆ ಕೊಡದೇ ಇದ್ದರೆ, ಜಿಲ್ಲಾ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳು ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಬೂಸ್ಟರ್ ಲಸಿಕೆ ನೀಡುವಲ್ಲಿ ವಿಳಂಬವಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಸರ್ಕಾರದಿಂದ ಸಂಬಳ ಪಡೆಯುವವರಿಗೆ ನಿಯತ್ತಾಗಿ ಕೆಲಸ ಮಾಡುವುದು ಗೊತ್ತಿಲ್ಲವೇ? ಲಸಿಕೆ ಕೊಡಲಿಕ್ಕೂ ನಾನೇ ಬರಬೇಕೇ? ಲಸಿಕೆ ಕೊಡದೇ ಕಾಗಕ್ಕ – ಗುಬ್ಬಕ್ಕನ ಕಥೆ ಹೇಳುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಪೊಲೀಸರು ಮಾಸ್ಕ್ ಕಡ್ಡಾಯಕ್ಕೆ ಹಾಗೂ ಜನಸಂ ದಣಿ ತಡೆಗೆ ಕ್ರಮ ತೆಗೆದುಕೊಳ್ಳಬೇಕು. ಸಾರಿಗೆ ಹಾಗೂ ಪೊಲೀಸ್ ಅಧಿಕಾರಿ ಗಳು ಜೊತೆಯಾಗಿ ಹೊರಗಿನಿಂದ ಬರುವವರ ಮೇಲೆ ನಿಗಾ ವಹಿಸಿ, ಅವರು ಮನೆಯಲ್ಲೇ ಕ್ವಾರಂಟೈನ್ ಆಗುವಂತೆ ನೋಡಿಕೊಳ್ಳಬೇಕೆಂದು ಸಚಿವರು ಸೂಚನೆ ನೀಡಿದರು.

ಜಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ಪಾಸಿಟಿವ್ ದರ ಶೇ.5ಕ್ಕೆ ತಲುಪಿದೆ. ಹೊರ ರಾಜ್ಯದಿಂದ ಬಂದವರೇ ಇದಕ್ಕೆ ಕಾರಣರಾಗಿದ್ದಾರೆ. ಈ ಬಗ್ಗೆ ನಿಗಾ ವಹಿಸಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಕೊರೊನಾ ಪ್ರಕರಣಗಳು ಹೆಚ್ಚಾದರೆ ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಪಂಗಡ ಇಲಾಖೆಗಳ ವಸತಿ ನಿಲಯ ಗಳನ್ನು ಕೋವಿಡ್ ಕೇರ್ ಸೆಂಟರ್‌ ಗಳಾಗಿ ಪರಿವರ್ತಿಸಲು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ವೈಯಕ್ತಿಕ ಕೆಲಸಗಳಿಗೆ ಒತ್ತು ನೀಡಲಾಗುತ್ತಿದೆ. ಗುಂಪು ಕೆಲಸಗಳಿದ್ದಾಗಲೂ 40ಕ್ಕಿಂತ ಹೆಚ್ಚು ಜನರು ಇರದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಡಿ.ಹೆಚ್.ಒ. ಡಾ. ನಾಗರಾಜ್, ಆರ್.ಸಿ.ಹೆಚ್. ಅಧಿಕಾರಿ ಡಾ. ಮೀನಾಕ್ಷಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಜಿ. ರಾಘವನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!