ಅಕ್ರಮ ಕಲ್ಲು ಗಣಿಗಾರಿಕೆ: ಕ್ರಮಕ್ಕೆ ಆಗ್ರಹ

ಅಕ್ರಮ ಕಲ್ಲು ಗಣಿಗಾರಿಕೆ: ಕ್ರಮಕ್ಕೆ ಆಗ್ರಹ - Janathavaniನಗರದಲ್ಲಿ ಸಮಾಜ ಪರಿವರ್ತನ ಸಮುದಾಯ ಸಂಚಾಲಕ ಎಸ್.ಆರ್. ಹಿರೇಮಠ

ದಾವಣಗೆರೆ, ಜ.11- ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕು ಚಟ್ನಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿರುವ ಮೆ.ಜಿ.ಎಂ. ಶುಗರ್ ಮತ್ತು ಎನರ್ಜಿ ಲಿಮಿಟೆಡ್ ಕಂಪನಿ ಹಾಗೂ ಮಾಲೀಕರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಸಮಾಜ ಪರಿವರ್ತನ ಸಮುದಾಯ ಸಂಚಾಲಕ ಎಸ್.ಆರ್. ಹಿರೇಮಠ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಟ್ನಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ಕಲ್ಲುಗಣಿಗಾರಿಕೆ ಸಂಬಂಧ  ಗಣಿ ಮತ್ತು  ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ಈಗಾಗಲೇ ವರದಿ ಸಲ್ಲಿಸಿದ್ದಾರೆ.

ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್‌.ಸಿ. ನ್ಯಾಯಾಲಯ ಹಿರೇಕೆರೂರು ಇಲ್ಲಿ ದೂರು ಸಲ್ಲಿಸಿ ದಾಸ್ತಾನು ಇರುವ 16080 ಮೆಟ್ರಿಕ್ ಟನ್ ಜಲ್ಲಿ ಹಾಗೂ 980 ಮೆಟ್ರಿಕ್ ಟನ್ ಕಟ್ಟಡ ಕಲ್ಲನ್ನು ಸರ್ಕಾರದ ಸ್ವಾಧೀನಕ್ಕೆ ಪಡೆದುಕೊಂಡಿದ್ದು, ಹರಾಜು ಮೂಲಕ ವಿಲೇವಾರಿ ಮಾಡಲು ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ.

ಅಲ್ಲದೇ, ಅನಧಿಕೃತವಾಗಿ ಉಪ ಖನಿಜ ತೆಗೆದು ಸಾಗಾಣಿಕೆ ಮಾಡಿರುವ ಪ್ರಮಾಣವನ್ನು ಡ್ರೋನ್ ಸಮೀಕ್ಷೆ ಮೂಲಕ ಅಂದಾಜಿಸಿ ಸದರಿ ಪ್ರಮಾಣಕ್ಕೆ ಕಾಂಪೌಂಡಿಂಗ್ ಶುಲ್ಕ ಮತ್ತು ರಾಜಧನ ಸಂಗ್ರಹಿಸಲು ಅಗತ್ಯ ಕ್ರಮ ಜರುಗಿಸಲೂ ಸಹ ಅಧಿಕಾರಿಗಳು ಸೂಚಿಸಿದ್ದಾರೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಕ್ರಮ ಜರುಗಿಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಅನೀಶ್ ಪಾಷಾ, ಎಂ.ಸಿ. ಹಾವೇರಿ, ಎನ್.ಸಿ. ದೊಡ್ಡಮನಿ, ಹುಸೇನ್ ಸಾಬ್ ಹಸನ್ ಸಾಬ್ ಬಿಲ್ಲಳ್ಳಿ ಉಪಸ್ಥಿತರಿದ್ದರು.

ಕೃಷಿ ಕಾಯ್ದೆ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಜಾಥಾ : ಕೇಂದ್ರ ಸರ್ಕಾರ ಜಾರಿಗೊಳಿಸಲುದ್ದೇಶಿಸಿದ್ದ ಮೂರು ಜನ ವಿರೋಧಿ ಕೃಷಿ ಕಾಯ್ದೆಗಳನ್ನು ಕರ್ನಾಟಕ ಸರ್ಕಾರವೂ ಕೂಡಲೇ ರದ್ದುಗೊಳಿಸಬೇಕು ಎಂದು ಎಸ್.ಆರ್. ಹಿರೇಮಠ ಒತ್ತಾಯಿಸಿದ್ದಾರೆ.

ಸರ್ಕಾರ ಈ  ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಜನಾಂದೋಲನಗಳ ಮಹಾ ಮೈತ್ರಿ, ಸಿಟಿಜನ್ ಫಾರ್ ಡೆಮಾಕ್ರಸಿ ಹಾಗೂ ಸಮಾನ ಮನಸ್ಕ ಸಂಘಟನೆಗಳೊಂದಿಗೆ ರಾಜ್ಯದಾದ್ಯಂತ ಜಾಗೃತಿ ಜಾಥಾ ನಡೆಸಿ, ಜನರ ಬೆಂಬಲ ಪಡೆದು ಬೇಡಿಕೆ ಈಡೇರುವವರೆಗೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಹೇಳಿದರು.

error: Content is protected !!