ಸಾಲ ವಿತರಣೆಯಲ್ಲಿ ಪ್ರಗತಿ ಸಾಧಿಸಲು ಕರೆ

ಲೀಡ್ ಬ್ಯಾಂಕ್ ಪುನರಾವಲೋಕನ ಸಮಿತಿ ಸಭೆಯಲ್ಲಿ ಜಿ.ಪಂ. ಸಿಇಒ ದಾನಮ್ಮನವರ

ಆಹಾರ ಸಂಸ್ಕರಣಾ ಘಟಕ: 2ನೇ ಸ್ಥಾನದಲ್ಲಿ ಜಿಲ್ಲೆ

ಆತ್ಮನಿರ್ಭರ ಭಾರತ ಅಭಿಯಾನದಡಿ ಕೇಂದ್ರ ಸರ್ಕಾರ ಆಹಾರ ಸಂಸ್ಕರಣೆ ಉದ್ಯಮಗಳಿಗೆ ಪ್ರೋತ್ಸಾಹಿಸುತ್ತಿದ್ದು ಅಂಥ ಘಟಕಗಳ ಸ್ಥಾಪನೆಗೆ ಸಾಲಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ಬೆಂಗಳೂರು ನಗರ ಜಿಲ್ಲೆಯ ನಂತರ ದಾವಣಗೆರೆ ಜಿಲ್ಲೆಯು ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ತಿರಸ್ಕೃತ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಜಿ.ಪಂ. ಸಿಇಒ ವಿಜಯ ಮಹಾಂತೇಶ ಹೇಳಿದರು.

ದಾವಣಗೆರೆ, ಜ.11- ಬ್ಯಾಂಕ್ ಅಧಿಕಾರಿಗಳು ಸಾಲ ವಿತರಣೆ ಗುರಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಸೂಚಿಸಿದರು.

ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಲೀಡ್ ಬ್ಯಾಂಕ್ ಜಿಲ್ಲಾಮಟ್ಟದ ಪುನರಾವಲೋಕನ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬ್ಯಾಂಕುಗಳು ಇತರ ಆದ್ಯತಾ ವಲಯಗಳಲ್ಲಿ ಬರುವ ವಸತಿ, ಶಿಕ್ಷಣ ಇನ್ನಿತರ ಕ್ಷೇತ್ರಗಳಲ್ಲಿ ಹೆಚ್ಚಿನ ಸಾಲ ವಿತರಣಾ ಪ್ರಗತಿಗೆ ಹೆಚ್ಚು ಒತ್ತು ಕೊಡುವಂತೆ ಹೇಳಿದರು.

ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಸುಶೃತ್ ಶಾಸ್ತ್ರಿ ಮಾತನಾಡುತ್ತಾ, ಎರಡು ವರ್ಷಗಳಿಂದ ಇತರ ಆದ್ಯತಾ ವಲಯದ ಗುರಿಯನ್ನು ಕಡಿಮೆ ಮಾಡಿದ್ದರೂ ಸಾಲ ನೀಡಿಕೆ ಸುಧಾರಣೆಯಾಗುತ್ತಿಲ್ಲ ಎಂದು ಹೇಳಿದರು.

ವಸತಿ ಸಾಲ ಮಂಜೂರು ಮಾಡಬೇಕಾದರೆ ಅರ್ಜಿದಾರರು ಎನ್‌ಕಂಬರೆನ್ಸ್ ಸರ್ಟಿಫಿಕೇಟ್ ನೀಡಬೇಕಾಗುತ್ತದೆ. ಆದರೆ ಉಪ ನೋಂದಣಾಧಿಕಾರಿ ಕಚೇರಿಯಿಂದ ಆ ಪ್ರಮಾಣಪತ್ರ ಬರಲು ವಿಳಂಬವಾಗುತ್ತಿದ್ದು, ಈ ಕಾರಣಕ್ಕೆ ಮಂಜೂರಾತಿ ನಿಧಾನವಾಗುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳು ವಿವರಿಸಿದರು.

ಜಿ.ಪಂ. ಸಿಇಒ ಮಾತನಾಡಿ, ಈ ಬಗ್ಗೆ ಕ್ರಮ ಕೈಗೊಳ್ಳಲು ಉಪ ನೋಂದಣಾಧಿಕಾರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು. ಶಿಕ್ಷಣ ಸಾಲ ನೀಡಿಕೆಯೂ ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದು ಸುಶೃತ್ ಶಾಸ್ತ್ರಿ ಹೇಳಿದರು.

7970 ಕೋಟಿ ಸಾಲದ ಕರಡು ಯೋಜನೆ: ಜಿಲ್ಲೆಯ ಬ್ಯಾಂಕುಗಳಿಂದ 2022-23ನೇ ಸಾಲಿನಲ್ಲಿ 7970 ಕೋಟಿ ರೂ.ಗಳ ಸಾಲ ನೀಡಲು ಯೋಜಿಸಲಾಗಿದೆ. ಅದರಲ್ಲಿ ಕೃಷಿಗೆ 4307 ಕೋಟಿ, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ 1193 ಕೋಟಿ ರೂ.ಗಳು ಸೇರಿವೆ ಎಂದು  ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಸುಶೃತ್ ಶಾಸ್ತ್ರಿ ಸಭೆಯಲ್ಲಿ  ತಿಳಿಸಿದರು.

ಇದೇ ಸಂದರ್ಭದಲ್ಲಿ ಬ್ಯಾಂಕುಗಳ ಸಾಲ ಮತ್ತು ಠೇವಣಿ ಅನುಪಾತ ಕಡಿಮೆ ಇರುವ ಬಗ್ಗೆಯೂ ಸಭೆಯಲ್ಲಿ ಚರ್ಚೆಗೆ ಬಂದಿತು. ಭಾರತೀಯ ರಿಜರ್ವ್ ಬ್ಯಾಂಕಿಗೆ ವರದಿ ನೀಡಬೇಕಿರುವುದರಿಂದ ಸುಧಾರಣೆ ಮಾಡಿಕೊಳ್ಳಿ ಎಂದು ಬ್ಯಾಂಕ್ ಅಧಿಕಾರಿಗೆ ಸಿಇಒ ಸೂಚಿಸಿದರು.

ನಬಾರ್ಡ್‌ನ 2022-23ನೇ ಸಾಲಿನ ಸಾಲ ಯೋಜನೆಯನ್ನು ಬಿಡುಗಡೆ ಮಾಡಲಾಯಿತು. ನಬಾರ್ಡ್‌ನ ಎ.ಜಿ.ಎಂ. ವಿ. ರವೀಂದ್ರ, ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಬಿ.ಜಿ. ದೊಡ್ಡಮನಿ ಇತರರು ಉಪಸ್ಥಿತರಿದ್ದರು.

error: Content is protected !!