ಕಳಪೆ ಆಹಾರದಿಂದ ಬೇಸತ್ತು ಹಾಸ್ಟೆಲ್ ಬಿಟ್ಟು ಹೋಗುತ್ತಿರುವ ವಿದ್ಯಾರ್ಥಿನಿಯರು

ವಾಸನ ಗ್ರಾಮದಲ್ಲಿ ಸ್ಮಶಾನಕ್ಕೆಂದು ಒಂದು ಎಕರೆ ಜಾಗ ಮೀಸಲಿಟ್ಟಿದೆ. ಆದರೆ ಬಲಾಢ್ಯರು ಅದನ್ನು ಒತ್ತುವರಿ ಮಾಡಿ ಕೃಷಿ ಮಾಡುತ್ತಿದ್ದಾರೆ. ಸ್ಮಶಾನವಿಲ್ಲದೆ ಆ ಗ್ರಾಮದಲ್ಲಿ ನಿಧನರಾದವರ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗಿದೆ. ಸಂಬಂಧಿತರು ಸ್ಮಶಾನದ ಒತ್ತುವರಿ ತೆರವುಗೊಳಿಸಬೇಕು.

– ಪಿ.ಜೆ. ಮಹಾಂತೇಶ್, ಸಂಚಾಲಕರು, ತಾಲ್ಲೂಕು ದಸಂಸ

ಹರಿಹರದಲ್ಲಿ ಎಸ್ಸಿ, ಎಸ್ಟಿ ಜಾಗೃತಿ ಸಭೆ 

ಹರಿಹರ, ಡಿ.9- ನಗರಸಭೆಯಿಂದ ಪೌರ ಕಾರ್ಮಿಕರಿಗೆ ಕಳಪೆ ಸೈಕಲ್, ಸ್ಮಶಾ ನದ ಜಾಗದ ಒತ್ತುವರಿ ತೆರವು, ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‍ಗಳಲ್ಲಿನ ಕಳಪೆ ಆಹಾರ, ದೇವದಾಸಿಯರಿಗೆ ಬಾರದ ಮಾಸಿಕ ವೇತನ, ವಸತಿ ಯೋಜನೆ ಸೇರಿದಂತೆ ನಾನಾ ಸಮಸ್ಯೆಗಳನ್ನು ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಿನ್ನೆ ನಡೆದ ಎಸ್ಸಿ, ಎಸ್ಟಿ ಜನಾಂಗದ ಜಾಗೃತಿ ಸಭೆಯಲ್ಲಿ ಪ್ರಸ್ತಾಪಿತವಾದವು. 

ಶಾಸಕ ಎಸ್.ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು.   ದಸಂಸ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ನಗರದ ಎಸ್‍ಜೆವಿಪಿ ಪಾಲಿಟೆಕ್ನಿಕ್ ಕ್ಯಾಂಪಸ್‍ನ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರ ಮಹಿಳಾ ಹಾಸ್ಟೆಲ್ ಇದೆ.

ಹಾಸ್ಟೆಲ್ ನಿವಾಸಿಗಳು ವಿದ್ಯಾರ್ಥಿನಿಯರಿದ್ದಾರೆ, ಅವರು ಪ್ರಶ್ನೆ ಮಾಡುವುದಿಲ್ಲವೆಂದು ಅತ್ಯಂತ ಕಳಪೆ ಗುಣ ಮಟ್ಟದ ಆಹಾರ ನೀಡಲಾಗುತ್ತಿದೆ. ಉತ್ತಮ ಆಹಾರ ನೀಡಿ ಎಂದರೆ, ಸರ್ಕಾರ ಕೊಡುವ 50 ರೂ.ನಲ್ಲಿ ಇಷ್ಟೇ ಕೊಡಲು ಸಾಧ್ಯ ಎಂದು ಅಲ್ಲಿನ ಸಿಬ್ಬಂದಿ ವಿದ್ಯಾರ್ಥಿನಿಯರ ಬಾಯಿ ಮುಚ್ಚಿಸುತ್ತಿದ್ದಾರೆ.

ಕಳಪೆ ಆಹಾರ, ಸಿಬ್ಬಂದಿಗಳ ವರ್ತನೆಯಿಂದ ಬೇಸತ್ತು ಹಾಸ್ಟೆಲ್ ಬಿಡಲು ನಿವಾಸಿಗಳು ಮುಂದಾಗುತ್ತಿದ್ದಾರೆ. ಇದರಿಂದ ಅವರ ಶಿಕ್ಷಣವೂ ಅರ್ಧಕ್ಕೆ ನಿಲ್ಲುವ ಆತಂಕವಿದೆ. ಸಂಬಂಧಿತ ಅಧಿಕಾರಿಗಳೂ ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. 

ತಾಲ್ಲೂಕಿನಲ್ಲಿನ ಅಪಾರ ಸಂಖ್ಯೆಯ ದೇವದಾಸಿಯರು, ವಿಧವೆಯರು, ವೃದ್ಧಾ ಪ್ಯರು ಪಡೆಯುವ ಮಾಸಿಕ ವೇತನ ನಿಯ ಮಿತವಾಗಿಲ್ಲ. ಇವರಲ್ಲಿನ ಕಡುಬಡವರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ನಿಯಮಿತವಾಗಿ ವೇತನ ದೊರಕಬೇಕಾಗಿದೆ ಎಂದ ಅವರು, ತಾಲ್ಲೂಕಿನಲ್ಲಿರುವ ನಿರ್ವಸತಿಗರಿಗೆ ವಸತಿ ಯೋಜನೆ ಜಾರಿ ಮಾಡಬೇಕಾಗಿದೆ ಎಂದು ಒಟ್ಟು 13 ಬೇಡಿಕೆಗಳ ಮನವಿಯನ್ನು ಶಾಸಕ ಎಸ್.ರಾಮಪ್ಪ ಮತ್ತು ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅವರಿಗೆ ಸಲ್ಲಿಸಿದರು.

ಹಿರಿಯ ಕ್ರೀಡಾಪಟು ಎಚ್.ನಿಜಗುಣ ಮಾತನಾಡಿ, ನಗರಸಭೆಯಿಂದ ಪೌರ ಕಾರ್ಮಿಕರಿಗೆ ಸೈಕಲ್ ವಿತರಣೆಯಲ್ಲಿ ಅಕ್ರಮ ನಡೆದಿದೆ. ನಗರಸಭಾ ಸದಸ್ಯರೇ ಈ ಕುರಿತು ಆರೋಪ ಮಾಡಿದರೂ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ ಎಂದು ಆರೋಪಿಸಿದರು.

ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮಿ ಪ್ರತಿಕ್ರಿಯಿಸಿ, ಪೌರ ಕಾರ್ಮಿಕರಿಗೆ ಗುಣಮಟ್ಟದ ಸೈಕಲ್ ವಿತರಿಸಲಾಗಿದೆ, ಅಕ್ರಮ ನಡೆದಿಲ್ಲ ಎಂದರು.

ದಸಂಸ ತಾಲ್ಲೂಕು ಮಹಿಳಾ ಸಂಚಾಲಕರಾದ ಭಾನುವಳ್ಳಿ ಚೌಡಮ್ಮ ಮಾತನಾಡಿದರು. 

ಡಿಎಸ್-4  ಮುಖಂಡ ಸಂತೋಷ್ ನೋಟದವರ್ ಮಾತನಾಡಿ, ಕ್ರೀಡಾ ಇಲಾಖೆಯ ವಾಣಿಜ್ಯ ಸಂಕೀರ್ಣದಲ್ಲಿನ ಮಳಿಗೆಗಳ ಮರು ಹಂಚಿಕೆಯಲ್ಲಿ ನಿಯಮ ಪಾಲನೆಯಾಗಿಲ್ಲ. ಇದರಿಂದ ಎಸ್ಸಿ, ಎಸ್ಟಿ ಜನಾಂಗದ ನಿರುದ್ಯೋಗಿಗಳಿಗೆ ಅನ್ಯಾಯವಾಗಿದೆ ಎಂದರು.

ಸಿಪಿಐ ಸತೀಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೈಯದ್ ನಾಸಿರುದ್ದೀನ್, ತಾಪಂ ಇಒ ಗಂಗಾಧರನ್, ಬಿಇಒ ಬಿ.ಸಿ. ಸಿದ್ದಪ್ಪ, ದಲಿತ ಮುಖಂಡರಾದ ಎಲ್. ನಿರಂಜನಮೂರ್ತಿ, ಎಚ್.ಮಲ್ಲೇಶ್, ಎಲ್.ಬಿ.ಹನುಮಂತಪ್ಪ, ಬಿಎಸ್ಪಿ ಮುಖಂಡ ಡಿ.ಹನುಮಂತಪ್ಪ, ಬಿ.ಎನ್.ರಮೇಶ್, ಭಾನುವಳ್ಳಿ ಮಂಜಪ್ಪ, ವೈ.ರಘುಪತಿ, ಜಿಗಳಿ ಪ್ರಕಾಶ್, ವಾಸನದ ಮಂಜುನಾಥ್, ಭಾನುವಳ್ಳಿ ಸಿ.ಚೌಡಪ್ಪ, ಕೆ.ಎನ್.ಹಳ್ಳಿ ಹನುಮಂತಪ್ಪ, ರೇಣುಕಮ್ಮ, ಮಿಟ್ಲಕಟ್ಟೆ ಮಹೇಶ್, ಬಸವಣ್ಣಿ ಇದ್ದರು.

error: Content is protected !!