ಸ್ಥಳೀಯ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಬೇಕು

ವಿದ್ಯಾರ್ಥಿಗಳಿಗೆ ಡಾ. ಆರ್. ಶಶಿಧರ್ ಕಿವಿಮಾತು

ದಾವಣಗೆರೆ, ಜ. 9- ವಿದ್ಯಾರ್ಥಿಗಳು ರೂಪಿಸುವ ಅಧ್ಯಯನ ವರದಿಗಳು ಸ್ಥಳೀಯ ಸಮಸ್ಯೆಗಳ ಕುರಿತದ್ದಾಗಿರಬೇಕು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ನೆರವಾಗುವಂತಿರ ಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥರಾದ ಡಾ. ಆರ್. ಶಶಿಧರ್ ಹೇಳಿದ್ದಾರೆ.

ನಗರದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈ – ಟೆಕ್ ಎಜುಕೇಷನ್ ವತಿಯಿಂದ ಮೊನ್ನೆ ಆಯೋ ಜಿಸಲಾಗಿದ್ದ ರಾಜ್ಯ ಮಟ್ಟದ   ಕಾರ್ಯಗಾರವಾದ §ಪ್ರಜ್ಞಾ¬ ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾ ಸಂದರ್ಭದಲ್ಲಿ ವಾಣಿಜ್ಯ ನಿರ್ವಹಣೆ ಹಾಗೂ ಮಾಹಿತಿ ತಂತ್ರಜ್ಞಾನಗಳ ಮೇಲೆ ಆಗಿರುವ ಪರಿಣಾಮಗಳ ಕುರಿತು ವಿದ್ಯಾರ್ಥಿಗಳು ಅಧ್ಯಯನ ವರದಿಗಳನ್ನು ಕಾರ್ಯಾಗಾರದಲ್ಲಿ ಮಂಡಿಸಿದ್ದರು.

ಕೊರೊನಾ ಸಂದರ್ಭದಲ್ಲಿ ಸಾಮಾಜಿಕವಾಗಿ ಹಾಗೂ ಸ್ಥಳೀಯವಾಗಿ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ದಾವಣಗೆರೆ ಸಣ್ಣ ವಹಿವಾಟುದಾರರು ಹೆಚ್ಚಾಗಿರುವ ನಗರವಾಗಿದೆ. ಹೀಗಾಗಿ ಇಲ್ಲಿ ಕೊರೊನಾ ಪರಿಣಾಮ ಇನ್ನೂ ಹೆಚ್ಚಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿ, ತಂತ್ರಜ್ಞಾನದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒತ್ತು ನೀಡಬೇಕಿದೆ ಎಂದು ಶಶಿಧರ್ ಹೇಳಿದರು.

ಲಾಕ್‌ಡೌನ್ ಅವಧಿಯಲ್ಲಿ ಇ-ಕಾಮರ್ಸ್ ಬೆಳೆದಿದೆ. ಅದರ ಮೌಲ್ಯ 8.3 ಶತಕೋಟಿ ಡಾಲರ್ ಆಗಿದ್ದು, ಪ್ರತಿ ವರ್ಷ ಶೇ.27ರಷ್ಟು ಬೆಳವಣಿಗೆ ಹೊಂದಿದೆ. ಫ್ಯಾಷನ್, ಬಟ್ಟೆ ಹಾಗೂ ದಿನಸಿ ವಸ್ತುಗಳು ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಬೇಡಿಕೆ ಪಡೆಯುತ್ತಿವೆ ಎಂದವರು ಹೇಳಿದರು.

ಡಿಜಿಟಲ್ ಮಾರ್ಕೆಟಿಂಗ್ ವಲಯದ  ಮೌಲ್ಯ160 ಶತಕೋಟಿ ಡಾಲರ್‌ಗಳಿಗೆ ತಲುಪಿದೆ. ಬ್ಲಾಕ್‌ಚೈನ್ ತಂತ್ರಜ್ಞಾನ ಈಗ ಶೈಕ್ಷಣಿಕ ವಲಯಕ್ಕೆ ಕಾಲಿಡುತ್ತಿದೆ. ನವೋದ್ಯಮಗಳು ವೇಗವಾಗಿ ಬೆಳೆಯುತ್ತಿವೆ. ಈ ಎಲ್ಲ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದರು.

ದಾವಣಗೆರೆ ವಿ.ವಿ. ಮ್ಯಾನೇಜ್‌ಮೆಂಟ್ ವಿಭಾಗದ ಉಪನ್ಯಾಸಕ ಚಂದ್ರಹಾಸ್ ಮಾತನಾಡಿ, ಗೆದ್ದವರು ಹಾಗೂ ಸೋತವರು ಇತಿಹಾಸ ರಚಿಸುತ್ತಾರೆಯೇ ವಿನಃ ಸುಮ್ಮನಿರುವವರು ಅಲ್ಲ. ಹೀಗಾಗಿ ವಿದ್ಯಾರ್ಥಿಗಳು ತಟಸ್ಥರಾಗದೇ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕು ಎಂದು ಕಿವಿಮಾತು ಹೇಳಿದರು.

ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈ ಟೆಕ್ ಎಜುಕೇಷನ್ ಪ್ರಾಂಶುಪಾಲ ಡಾ. ಬಿ. ವೀರಪ್ಪ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಬಿ – ಸ್ಕೂಲ್ಸ್ ನಿರ್ದೇಶಕ ಡಾ. ಸ್ವಾಮಿ ತ್ರಿಭುವಾನಂದ ಉಪಸ್ಥಿತರಿದ್ದರು.

error: Content is protected !!