ದೂಡಾ ಯೋಜನೆ: ಜಮೀನು ನೀಡಲು ರೈತರ ಸಮ್ಮತಿ

ದಾವಣಗೆರೆ, ಜ. 7- ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಸತಿ ಯೋಜನೆ ಅಭಿವೃದ್ಧಿ ಪಡಿಸಲು ಕುಂದುವಾಡ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿನ ಒಟ್ಟು 53 ಎಕರೆ 19.8 ಗುಂಟೆ ಜಮೀನು ನೀಡಲು ರೈತರು ಸಮ್ಮತಿಸಿದ್ದಾರೆ ಎಂದು ದೂಡಾ ಅಧ್ಯಕ್ಷ  ದೇವರಮನಿ ಶಿವಕುಮಾರ್ ತಿಳಿಸಿದ್ದಾರೆ.

ಪ್ರಾಧಿಕಾರವು ಸರ್ಕಾರದಿಂದ ಅನುಮೋದನೆಗೊಂಡ ಮಹಾಯೋಜನೆ ಹಸಿರು ವಲಯದಲ್ಲಿರುವ  ಕುಂದವಾಡ ಗ್ರಾಮದ ಬಳಿ ವಸತಿ ಯೋಜನೆ  ಅಭಿವೃದ್ಧಿಪಡಿಸಲು ನೇರ ಖರೀದಿ ಮುಖಾಂತರ ಜಮೀನು ನೀಡಲು ಸಂಬಂಧಿಸಿದ ಖಾತೆದಾರರೊಂದಿಗೆ ದರ ನಿಗದಿ ಮಾಡಲು ಇಂದು ಸಭೆ ನಡೆಸಲಾಯಿತು.  ಜಿಲ್ಲಾಧಿಕಾರಿಗಳು ಜಮೀನಿಗೆ ಎಕರೆ ಒಂದಕ್ಕೆ 1.18 ಕೋಟಿ ರೂ. ನೀಡಲು, ಆ ಭಾಗದ ಜಮೀನಿನ ಮಾಲೀಕರೊಂದಿಗೆ ಚರ್ಚೆ ನಡೆಸಿದರು.  ಅದರಂತೆ ಜಮೀನಿಗೆ ಪ್ರತಿ ಎಕರೆಗೆ 1.18 ಕೋಟಿ ರೂ. ನಂತೆ ಪಡೆಯಲು ಎಲ್ಲ ರೈತರು ಒಪ್ಪಿಗೆ ಸೂಚಿಸಿದ್ದಾರೆ ಎಂದು ದೇವರಮನಿ ಹೇಳಿದರು.

ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್, ತಹಸೀಲ್ದಾರ್ ಗಿರೀಶ್, ಉಪನೋಂದಣಾಧಿಕಾರಿ ಹಾಗೂ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಹೆಚ್. ಶ್ರೀಕರ್, ಪ್ರಾಧಿಕಾರದ ಸದಸ್ಯರುಗಳಾದ ಮಾರುತಿರಾವ್ ಘಾಟ್ಗೆ, ಲಕ್ಷ್ಮಣ, ಬಾತಿ ಚಂದ್ರಶೇಖರ್, ಗೌರಮ್ಮ ವಿ. ಪಾಟೀಲ್, ರೈತ ಮುಖಂಡರುಗಳಾದ ಜಿ.ಸಿ. ದೇವರಾಜ್, ಎಂ. ಹನುಮಂತಪ್ಪ, ಷಣ್ಮುಖಪ್ಪ, ನರಸಪ್ಪರ ಶಿವಣ್ಣ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

error: Content is protected !!