ಎಸ್ಸಿ-ಎಸ್ಟಿ ಹಿತರಕ್ಷಣಾ ಜಾಗೃತ ಸಭೆಯಲ್ಲಿ ಶಾಸಕ ರಾಮಪ್ಪ ಸೂಚನೆ
ವಿದ್ಯಾಭ್ಯಾಸ, ಆರೋಗ್ಯ ಸೇವೆಗಳಿಗೆ ಮನವಿ
ಎಸ್ಸಿ, ಎಸ್ಟಿ ಸಮುದಾಯದ ಹಿತರಕ್ಷಣಾ ಸಭೆಯಲ್ಲಿ ದಲಿತ ಸಮುದಾಯದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಡೊನೇಷನ್ ಪಡೆಯದೆ ವಿದ್ಯಾಭ್ಯಾಸ ನೀಡಬೇಕು, ದಲಿತರ ಬಡಾವಣೆಗಳ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಬೇಕು, ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸಬೇಕು ಎಂಬ ಹಲವಾರು ವಿಷಯಗಳ ಬಗ್ಗೆ ಶಾಸಕ ರಾಮಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಹರಿಹರ, ಜ. 7- ನಗರಸಭೆಯ ವತಿಯಿಂದ ಆಶ್ರಯ ಕಾಲೋನಿ ಮತ್ತು ಇತರೆ ಸ್ಲಂ ನಿವಾಸಿಗಳು ತಮ್ಮ ಹೆಸರಿನ ಹಕ್ಕು ಪತ್ರವನ್ನು ಬೇರೆಯವರ ಹೆಸರಿನವರಿಗೆ ಖಾತೆ ಮಾಡಲು ನಗರಸಭೆಗೆ 90 ಸಾವಿರ ರೂ. ಕಟ್ಟಲು ತಿಳಿಸುತ್ತಿರುವುದಕ್ಕೆ ಶಾಸಕ ಎಸ್. ರಾಮಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದ ತಾ.ಪಂ. ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನಾಂಗದ ಹಿತರಕ್ಷಣಾ ಜಾಗೃತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹಣ ಕಟ್ಟಿದ ನಂತರದಲ್ಲಿ ಖಾತೆ ಮಾಡಿಕೊಡುವುದಕ್ಕೆ ಬರುತ್ತದೆ ಎಂದು ನಿಮ್ಮಲ್ಲಿ ಯಾವ ಆದೇಶ ಪ್ರತಿ ಇದೆ? ಇದಕ್ಕೆ ದಾಖಲೆಗಳನ್ನು ನೀಡಿ, ಇಲ್ಲದೆ ಹೋದರೆ ನಿವಾಸಿಗಳ ಹೆಸರಿಗೆ ಖಾತೆಯನ್ನು ಮಾಡಿ ಎಂದು ರಾಮಪ್ಪ ಹೇಳಿದರು.
ನಗರದ ಆಶ್ರಯ ಬಡಾವಣೆಯ ಬಹುತೇಕ ಸಾರ್ವಜನಿಕರು ಹಿಂದೆ ಸರ್ಕಾರ ನಿಗದಿ ಮಾಡಿದ್ದ 5 ಸಾವಿರ ರೂಪಾಯಿ ಕೊಟ್ಟು ಹಕ್ಕುಪತ್ರವನ್ನು ಪಡೆದಿದ್ದಾರೆ. ನಂತರ ಅವರು ಮನೆಗಳನ್ನು ಮಾರಿದ್ದಾರೆ. ಈಗ ಇರುವವರಿಗೆ ಖಾತೆ ಮಾಡಿ ಎಂದರೆ ನೆಪ ಹೇಳುತ್ತಿದ್ದೀರಿ. ನಿಮ್ಮಲ್ಲಿ ಆದೇಶದ ಪ್ರತಿ ಇಲ್ಲದಿದ್ದರೆ ವಾರದಲ್ಲಿ ಆಶ್ರಯ ಬಡಾವಣೆ ನಿವಾಸಿಗಳಿಗೆ ಖಾತೆ ಮಾಡಿಕೊಡಿ ಎಂದು ಪೌರಾಯುಕ್ತರಿಗೆ ಶಾಸಕರು ತಿಳಿಸಿದರು.
ನಗರದ ದಲಿತ ಸಮುದಾಯದ ಬಹುದಿನಗಳ ಬೇಡಿಕೆಯಂತೆ ನಗರದ ಹಳೆ ನ್ಯಾಯಾಲಯದ ಸ್ಥಳದಲ್ಲಿ ಡಾ. ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು ಎಂದು ರಾಮಪ್ಪ ಸೂಚಿಸಿದರು.
ಮೈಸೂರು ಕಿರ್ಲೋಸ್ಕರ್ ಕಂಪನಿಯ ಸ್ಥಳದಲ್ಲಿ ಒತ್ತುವರಿ ಆಗಿರುವ 4 ಎಕರೆ 34 ಗುಂಟೆ ಜಮೀನನ್ನು ವಶಪಡಿಸಿಕೊಂಡು ಸ್ಥಳೀಯ ದಲಿತ ಸಮುದಾಯದ ಜನರಿಗೆ ಹಂಚಿಕೆ ಮಾಡಲು ಸೂಚನೆ ನೀಡಲಾಗಿದೆ. ಅಧಿಕಾರಿಗಳು ತ್ವರಿತ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕರು ಹೇಳಿದರು.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಕಂಪನಿಯ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳನ್ನು ಕರೆಸಿ ಮಾತನಾಡಲಾಗಿದೆ. ಅತಿ ಶೀಘ್ರದಲ್ಲಿ ಒತ್ತುವರೆ ಆಗಿರುವ ಸ್ಥಳವನ್ನು ತೆರವುಗೊಳಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.
ತಾ.ಪಂ ಇ.ಓ. ಗಂಗಾಧರನ್ ಮಾತನಾಡಿ, 873 ಮನೆಗಳ ಯೋಜನೆ ಮಂಜೂರಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.
ಹೆಚ್. ನಿಜಗುಣ ಮಾತನಾಡಿ, ನಗರಸಭೆ ವತಿಯಿಂದ ಪೌರ ಕಾರ್ಮಿಕರಿಗೆ ವಿತರಣೆ ಮಾಡಿರುವ ಸೈಕಲ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.
ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮಿ ಮಾತನಾಡಿ, ಪೌರ ಕಾರ್ಮಿಕರು ಗುಣಮಟ್ಟದ ಸೈಕಲ್ ಎಂದು ಹೇಳಿದ ನಂತರದಲ್ಲಿ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲಾಗಿದೆ ಎಂಬ ಆರೋಪ ತಳ್ಳಿ ಹಾಕಿದರು.
ಸಭೆಯಲ್ಲಿ ದಲಿತ ಮುಖಂಡ ಪಿ.ಜೆ. ಮಹಾಂತೇಶ್, ಸಂತೋಷ ನೋಟದರ, ಭಾನುವಳ್ಳಿ ಎ.ಕೆ. ಮಂಜಪ್ಪ, ನಿರಂಜನಮೂರ್ತಿ, ಜಿಗಳಿ ಪ್ರಕಾಶ್, ವಿಶ್ವನಾಥ್ ಮೈಲಾಳ, ರಾಜನಹಳ್ಳಿ ಮಂಜುನಾಥ್, ಹೆಚ್. ಸುಧಾಕರ, ಸುರೇಶ್ ಕುಣೆಬೆಳಕೆರೆ ಮಾತನಾಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಸಿಪಿಐ ಸತೀಶ್ ಕುಮಾರ್, ಬಿಇಓ ಬಿ.ಎಸ್. ಸಿದ್ದಪ್ಪ, ಡಾ ಚಂದ್ರಮೋಹನ್, ನಾರನಗೌಡ, ಲಕ್ಮ್ಮಪ್ಪ, ಚಂದ್ರಕಾಂತ್, ಶೀಲಾ, ರೇಖಾ, ನಿರ್ಮಲ, ವಿದ್ಯಾ ಪರವಿನ್ ಬಾನು, ನಾಸೀರ್ ವುದ್ದೀನ್, ಲಿಂಗರಾಜ್, ವಿಜಯ ಮಹಾಂತೇಶ್, ದಲಿತ ಸಮಾಜದ ಮುಖಂಡರಾದ ಬಿ.ಎನ್. ರಮೇಶ್, ಹೆಚ್. ಮಲ್ಕೇಶ್, ಹನುಮಂತಪ್ಪ, ದೇವೇಂದ್ರಪ್ಪ, ಎಲ್.ಬಿ. ಹನುಮಂತಪ್ಪ, ಮಂಜುನಾಥ್ ರಾಜನಹಳ್ಳಿ, ವೈ ರಘುಪತಿ, ಮಂಜಪ್ಪ ಭಾನುವಳ್ಳಿ, ಗುರು, ಎಸ್ಟಿ ಸಮಾಜದ ಮುಖಂಡರಾದ ಜಿಗಳಿ ಆನಂದಪ್ಪ ಮತ್ತು ಇತರರು ಹಾಜರಿದ್ದರು.