ಜಿಲ್ಲಾಭಿವೃದ್ಧಿಗೆ 2,500 ಕೋಟಿ ಅನುದಾನ

ಹರಿಹರ : 6 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಿದ ಸಂಸದ ಸಿದ್ದೇಶ್ವರ

ಅನುದಾನ ನನ್ನದು, ಪಟಾಕಿ ನಿಮ್ಮದು!

ಕೊಂಡಜ್ಜಿ-ಗಂಗನರಸಿ ಮಧ್ಯದ ಸೇತುವೆ ನಿರ್ಮಾಣದ ಗುದ್ದಲಿ ಪೂಜೆಗೆ ಶಾಸಕ ಎಸ್. ರಾಮಪ್ಪ ಆಗಮಿಸಿದಾಗ ಅವರ ಅಭಿಮಾನಿಗಳು ಪಟಾಕಿ ಸಿಡಿಸಿದರು.  ಇದಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು, ಅನುದಾನ ತಂದು ಅಭಿವೃದ್ಧಿ ಮಾಡಿಸುವುದು ನಾನು. ಆದರೆ, ಜನರು ಮಾತ್ರ ನಿಮಗೆ ಪಟಾಕಿ ಸಿಡಿಸಿ ಸ್ವಾಗತಿಸುತ್ತಾರೆ ! ಎಂತಹ ಕಾಲ ನೋಡಿ ರಾಮಪ್ಪ ಎಂದು ನಗುತ್ತಾ ಹೇಳಿದರು.

ಹರಿಹರ, ಜ. 6 – ತಾಲ್ಲೂಕಿನಲ್ಲಿ ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಮಳೆ ಬಂದು ಹಲವಾರು ಗ್ರಾಮಗಳ ರಸ್ತೆಗಳು ಸಂಪೂರ್ಣವಾಗಿ ಹಾನಿಯಾಗಿದ್ದರಿಂದ ಸರ್ಕಾರಕ್ಕೆ ಒತ್ತಾಯ ಮಾಡಿ 6 ಕೋಟಿ ರೂ. ಬಿಡುಗಡೆ ಮಾಡಿಸಿ, ಇಂದು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.

ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ 2 ಕೋಟಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕೊಂಡಜ್ಜಿ ಮತ್ತು ಗಂಗನರಸಿ ಗ್ರಾಮದ ಸೇತುವೆ ಕಾಮಗಾರಿ ಮತ್ತು ಕೆಂಚನಹಳ್ಳಿ ಗ್ರಾಮದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿ, ನಂತರದಲ್ಲಿ ವೇದಿಕೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಹರಿಹರ ತಾಲ್ಲೂಕಿನ ಸ್ಥಳಿಯ ಕಾರ್ಯ ಕರ್ತರು ಮತ್ತು ಮುಖಂಡರು ಹಾನಿಯಾಗಿ ರುವ ರಸ್ತೆಗಳನ್ನು ದುರಸ್ತಿಪಡಿಸುವಂತೆ ಮನವಿ ಮಾಡಿಕೊಂಡಿದ್ದರಿಂದಾಗಿ, ಸರ್ಕಾರಕ್ಕೆ ಬಹಳ ಒತ್ತಾಯ ಮಾಡಿ ಪ್ರಕೃತಿ ವಿಕೋಪ ಪರಿಹಾರದ ಅಡಿಯಲ್ಲಿ 6 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ಯಲ್ಲಿ 21 ಕೋಟಿ ರೂ. ವೆಚ್ಚದಲ್ಲಿ 25 ಕಿಲೋಮೀಟರ್ ರಸ್ತೆಗಳ ಕಾಮಗಾರಿ ಮಾಡಲಾಗಿದೆ. ಎಕ್ಕೆಗೊಂದಿ – ಭಾನುವಳ್ಳಿ ರಸ್ತೆ ದುರಸ್ತಿ ಪಡಿಸುವುದರ ಜೊತೆಗೆ ಸಿರಿಗೆರೆ ಕ್ರಾಸ್‌ನಿಂದ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಜಲಜೀವನ್ ಮಿಷನ್ ಅಡಿಯಲ್ಲಿ 73 ಗ್ರಾಮಗಳಿಗೆ ನೀರು ಸರಬರಾಜು ಮಾಡಲು 35 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಈ ಪೈಕಿ 2020-21ನೇ ಸಾಲಿನಲ್ಲಿ 7 ಕೋಟಿ ರೂ.ಗಳ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಹೇಳಿದರು.

ನೀರಾವರಿ ಅಭಿವೃದ್ಧಿ ನಿಗಮದಿಂದ 3 ಕೋಟಿ ರಸ್ತೆ ಅಭಿವೃದ್ಧಿಗೆ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಅಭಿವೃದ್ಧಿಗೆ ಇಲ್ಲಿಯವರೆಗೆ 2,500 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಮಾಡಲಾಗಿದೆ. ಕೊಂಡಜ್ಜಿ ಗ್ರಾಮದ ಹಿರಿಯ ರಾಜಕೀಯ ಮುತ್ಸದ್ಧಿ ಕೊಂಡಜ್ಜಿ ಬಸಪ್ಪನವರ ಸಮಾಧಿ  ಮುಂದಿನ ರಸ್ತೆಯನ್ನು ಕೇಂದ್ರ ಸಚಿವರಾದ ಅಮಿತ್ ಷಾ ಬರುವ ಸಮಯದಲ್ಲಿ ದುರಸ್ತಿ ಪಡಿಸಲಾಗಿದೆ ಹೇಳಿದರು.

ಶಾಸಕ ಎಸ್. ರಾಮಪ್ಪ ಮಾತನಾಡಿ, ಚುನಾವಣೆ ಸಮಯ ಬಂದಾಗ ರಾಜಕೀಯ ಮಾಡೋಣ. ಆದರೆ, ತಾಲ್ಲೂಕಿನ ಅಭಿವೃದ್ಧಿ ವಿಚಾರ ಬಂದಾಗ ನಾವೆಲ್ಲರೂ ಒಗ್ಗಟ್ಟಿನಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

 ತಾಲ್ಲೂಕಿನಲ್ಲಿ ಇತ್ತೀಚೆಗೆ ಮಳೆ ಬಂದು ಬಹಳ ರಸ್ತೆಗಳು ಹಾನಿಯಾಗಿವೆ. ಇವುಗಳ ಅಭಿವೃದ್ಧಿಗೆ ಸಂಸದರ ಜೊತೆಗೂಡಿ ಶ್ರಮಿಸುತ್ತಿದ್ದೇನೆ. ಈಗಾಗಲೇ ಎಕ್ಕೆಗೊಂದಿ-ಭಾನುವಳ್ಳಿ ರಸ್ತೆ ಕಾಮಗಾರಿ ಟೆಂಡರ್ ಹಂತದಲ್ಲಿ ಇದೆ ಎಂದವರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಕೊಂಡಜ್ಜಿ ಗ್ರಾ.ಪಂ. ಅಧ್ಯಕ್ಷ ಗಂಗಾಧರಪ್ಪ, ಜಿಪಂ ಮಾಜಿ ಸದಸ್ಯ ವಾಗೀಶ್ ಸ್ವಾಮಿ, ಗಿರೀಶ್‌ ಪ್ರಭು ಕೊಂಡಜ್ಜಿ, ಗ್ರಾಮಾಂತರ ಘಟಕದ ಬಿಜೆಪಿ ಅಧ್ಯಕ್ಷ ಲಿಂಗರಾಜ್ ಹಿಂಡಸಘಟ್ಟ ಮತ್ತಿತರರು ಉಪಸ್ಥಿತರಿದ್ದರು.

error: Content is protected !!