ಆರೋಗ್ಯ ಸುಸ್ಥಿತಿಯಲ್ಲಿರಲು ಸೂರ್ಯ ನಮಸ್ಕಾರ ನೆರವು

ಹೊನ್ನಾಳಿ, ಜ. 6- ಜಗತ್ತಿನ ಸಮಸ್ತ ಜೀವಿಗಳ ಅಸ್ತಿತ್ವಕ್ಕೆ ಕಾರಣವಾಗಿರುವ ಸೂರ್ಯನಿಗೆ ಯಾವುದೇ ಜಾತಿ, ಧರ್ಮವಿಲ್ಲ.  ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಸೂರ್ಯ ನಮಸ್ಕಾರ. ಇದಕ್ಕೆ ವೇದ ಕಾಲದಿಂದಲೂ ತನ್ನದೇ ಆದ ಮಹತ್ವವಿದೆ ಎಂದು ಯೋಗ ಶಿಕ್ಷಕ ಮಹೇಂದ್ರ ಬಳಿಗಾರ್ ತಿಳಿಸಿದರು.

ತಾಲ್ಲೂಕಿನ ಹನುಮಸಾಗರದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊನ್ನಾಳಿ ಪತಂಜಲಿ ಯೋಗ ಸಮಿತಿಯವರಿಂದ ಏರ್ಪಡಿಸಿದ್ದ  75 ಕೋಟಿ ಸೂರ್ಯ ನಮಸ್ಕಾರದ 21 ನೇ ದಿನದ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಉಸಿರಾಟದ ವಿನ್ಯಾಸಕ್ಕೆ ಅನುಗುಣವಾಗಿ ಲಯಬದ್ಧ ರೀತಿಯಲ್ಲಿ ಸಂಯೋಜನೆಗೊಂಡಿರುವ ವಿಶಿಷ್ಟ ಆಸನವಾಗಿರುವ ಸೂರ್ಯ ನಮಸ್ಕಾರ ಎಲ್ಲಾ ಆಸನಗಳಿಗಿಂತಲೂ ಸರ್ವಶ್ರೇಷ್ಠವಾದದ್ದು. ವಿವಿಧ ಆಸನಗಳ ಬದಲಿಗೆ ಮುಂಜಾನೆ ಸೂರ್ಯ ನಮ ಸ್ಕಾರ ಮಾಡುವುದರಿಂದ ನಮಗೆ ಅಧಿಕ ಲಾಭವಿದೆ ಎನ್ನುತ್ತಾರೆ ತಜ್ಞರು. ಸೂರ್ಯ ನಮಸ್ಕಾರ ಮಾಡುವ ವೈಜ್ಞಾನಿಕ ವಿಧಾನವನ್ನು ಇಲ್ಲಿ ಸುಲಭವಾಗಿ ಅರ್ಥ ವಾಗುವ ಹಾಗೆ ತಿಳಿಸಲಾಗಿದೆ. ಇದನ್ನು ನೋಡಿ ಕೊಂಡು, ಸರ್ವಾಂಗೀಣ ಆರೋಗ್ಯಕ್ಕಾಗಿ ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡಬಹುದು. ಯೋಗದ ಅವಿಭಾಜ್ಯ ಅಂಗವಾಗಿರುವ ಸೂರ್ಯ ನಮಸ್ಕಾರವು 12 ಆಸನಗಳನ್ನು ಒಳಗೊಂಡಿರುವ ಒಂದೇ ಆಸನ ವಾಗಿದೆ ಎಂದು ಮಹೇಂದ್ರ ಬಳಿಗಾರ್ ತಿಳಿಸಿದರು.

ಈ ಸಂದರ್ಭದಲ್ಲಿ  ಯೋಗ ಶಿಕ್ಷಕರಾದ ಸುರೇಶ್, ಚಂದ್ರಪ್ಪ, ಉಮೇಶ್, ಶಾಲೆಯ ಮುಖ್ಯ ಶಿಕ್ಷಕ  ಕೆ.ಜಿ. ಚಂದ್ರಪ್ಪ, ಸಹ ಶಿಕ್ಷಕರಾದ ಆರ್. ಜ್ಯೋತಿ, ಹೆಚ್. ಲಲಿತಮ್ಮ, ಎಸ್. ಬಸವರಾಜಪ್ಪ, ಎಂ. ಶ್ರೀಕಾಂತ ಉಪಸ್ಥಿತರಿದ್ದರು.

error: Content is protected !!