ರಾಣೇಬೆನ್ನೂರು, ಜ.6- ಸ್ನಾತಕೋತ್ತರ ಎನ್‌ಇಟಿ, ಕೆಎಸ್ ಇಟಿ, ಪಿಎಚ್‌ಡಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸಹಾಯಕ ಪ್ರಾಧ್ಯಾಪಕರಾಗುವ ಕನಸು ಕಾಣುತ್ತಿದ್ದ ಸಾವಿರಾರು ಯುವಕರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಂದ ಹೊಸ ನಿಯಮ ತಣ್ಣೀರು ಎರಚಿದಂತಾಗಿದ್ದು ಈ ನಿಯಮವನ್ನು ಬದಲಾಯಿಸುವ ಅವಶ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿರುವುದಾಗಿ ಇಸ್ಮಾಯಿಲ್ ಐರಣಿ ತಿಳಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1242 ಸಹಾಯಕ ಪ್ರಾಧ್ಯಾಪಕರ ಸ್ಥಾನಗಳಿಗೆ ನೇಮಕ ಮಾಡಲು ಅರ್ಜಿ ಕರೆಯಲಾಗಿತ್ತು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಸಮೀಪಿಸುತ್ತಿದ್ದಂತೆ, ಅರ್ಹ ಪರೀಕ್ಷೆಗಳು ಪಾಸಾಗಿದ್ದರೂ ಪದವಿಯಲ್ಲಿ ಐಚ್ಛಿಕ ಒಂದೇ ವಿಷಯ ಓದದವರು ನೇಮಕಾತಿಗೆ ಅರ್ಹರಾಗುವುದಿಲ್ಲ ಎನ್ನುವ ಪ್ರಾಧಿಕಾರದ ಹೊಸ ನಿಯಮದಿಂದ ಅನ್ಯಾಯವಾಗಲಿದೆ ಎಂದವರು ಹೇಳಿದರು.
ಈ ಸಮಸ್ಯೆಯ ವ್ಯಾಪ್ತಿಯಲ್ಲಿ ಸಹಪ್ರಾಧ್ಯಾಪಕರಾಗುವ ಕನಸು ಕಾಣುತ್ತಿರುವ ಯುವಕರು ತಮಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿಕೊಳ್ಳಲು ಸಂಘಟಿತರಾಗಬೇಕಾಗಿದೆ. ಆ ದಿಶೆಯಲ್ಲಿ ಪ್ರಯತ್ನ ನಡೆಸಿರುವ ನನ್ನ 9980860514 ಮತ್ತು ರವಿಪ್ರಕಾಶ 6363454265 ಸಂಪರ್ಕಿಸುವಂತೆ ಇಸ್ಮಾಯಿಲ್ ಕೋರಿದ್ದಾರೆ.
ಜೆಸಿ ಸಂಸ್ಥೆ ಬೆಂಬಲ: ಹಳೆಯ ವಿದ್ಯಾರ್ಥಿಗಳಿಗೆ ಮೊದಲಿನ ವ್ಯವಸ್ಥೆಯನ್ನ ಜಾರಿಗೊಳಿಸಿ, ಬರುವ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ಹೊಸ ನಿಯಮ ಅನ್ವಯಿಸುವಂತೆ ಸರ್ಕಾರ ಆದೇಶಿಸಬೇಕು ಎಂದು ಇಲ್ಲಿನ ಜೆಸಿ ಸಂಸ್ಥೆಯ ಈಗಿನ ಅಧ್ಯಕ್ಷ ವೆಂಕಟೇಶ್ ಕಾಕಿ ಹಾಗೂ ಹಿಂದಿನ ಅಧ್ಯಕ್ಷ ಪ್ರಕಾಶ್ ಗಚ್ಚಿನಮಠ ಒತ್ತಾಯಿಸಿದ್ದಾರೆ