ವಾರಾಂತ್ಯದ ಕರ್ಫ್ಯೂ : ಸರ್ಕಾರದ ಮಾರ್ಗಸೂಚಿಗಳು ಅವೈಜ್ಞಾನಿಕ

ವಾರಾಂತ್ಯದ ಕರ್ಫ್ಯೂ : ಸರ್ಕಾರದ ಮಾರ್ಗಸೂಚಿಗಳು ಅವೈಜ್ಞಾನಿಕ - Janathavaniದಾವಣಗೆರೆ,ಜ.6- ಓಮಿಕ್ರಾನ್ ಹಿನ್ನೆಲೆಯಲ್ಲಿ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳು ಅವೈಜ್ಞಾನಿಕವಾಗಿವೆ ಎಂದು ಹೇಳಿರುವ ನಗರದ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ಈ ಮಾರ್ಗಸೂಚಿಗಳಲ್ಲಿ ನೀತಿ – ನಿಯಮಗಳಿಲ್ಲ ಎಂದು ಕಿಡಿ ಕಾರಿದ್ದಾರೆ.

ಕೊರೊನಾ 3ನೇ ಅಲೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಾರಾಂತ್ಯದ ಕರ್ಫ್ಯೂ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಹೋಟೆಲ್‌ಗಳಿಂದಲೇ ಕೊರೊನಾ ಹರಡುತ್ತದೆ ಎನ್ನುವ ರೀತಿಯಲ್ಲಿ ಹೋಟೆಲ್‌ಗಳ ಮೇಲೆ  ನಿರ್ಬಂಧಗಳನ್ನು ವಿಧಿಸಿರುವುದನ್ನು ಖಂಡಿಸಿದ್ದಾರೆ. ಬಸ್ಸಿನಲ್ಲಿ 50, ಚಿತ್ರಮಂದಿರಗಳಲ್ಲಿ ನೂರಾರು, ರೈಲಿನಲ್ಲಿ ಸಾವಿರಾರು ಜನರು ಸೇರುವಾಗ ಅವುಗಳಿಗೆ ಒಂದು ನಿಯಮವಾದರೆ, ಹೋಟೆಲ್‌ಗಳಿಗೆ ಮತ್ತೊಂದು ನಿಯಮ ಮಾಡಲಾಗಿದೆ. ಇದು ಯಾವ ನೀತಿ ? ಎಂದು ರಾಜಣ್ಣ ಅವರು ಪ್ರಶ್ನಿಸಿದ್ದಾರೆ.

ಬಹುತೇಕ ಹೋಟೆಲ್‌ಗಳಲ್ಲಿ ಬಿಸಿ ನೀರು, ಬಿಸಿ ಊಟ ಕೊಡುತ್ತಿರುವುದಲ್ಲದೇ, ಗ್ರಾಹಕರನ್ನು ಟೇಬಲ್‌ಗೆ ಒಬ್ಬಿಬ್ಬರಂತೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಡುವುದರ ಮೂಲಕ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರೂ, ಹೋಟೆಲ್‌ಗಳಿಂದಲೇ ಕೊರೊನಾ ಹರಡುತ್ತೆ ಎನ್ನುವ ರೀತಿಯಲ್ಲಿ ಹೋಟೆಲ್‌ಗಳ ಮೇಲೆ ನಿರ್ಬಂಧ ಹೇರುವುದು ಸಮಂಜಸವಲ್ಲ ಎಂದು ಅವರು ಹೇಳಿದ್ದಾರೆ.

ವಾರಾಂತ್ಯದ ದಿನಗಳಲ್ಲಿ ಕರ್ಫ್ಯೂ ವಿಧಿಸಿದರೆ, ಪ್ರತಿದಿನ ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ಹಾಕಿದರೆ ಕೊರೊನಾ ಹರಡದಂತೆ ತಡೆಗಟ್ಟಲು ಸಾಧ್ಯವೇ ? ಎಂದು ಕೇಳಿರುವ ಅವರು, ಉಳಿದ ದಿನಗಳು, ಹಗಲು ಹೊತ್ತಿನಲ್ಲಿ  ಕೊರೊನಾ ಹರಡುವುದಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ. ಮಾರ್ಗಸೂಚಿಗಳನ್ನು ರೂಪಿಸುವಾಗ ಎಲ್ಲಾ ಆಚಾರ – ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಮಾಡಬೇಕು. ಯದ್ವಾ – ತದ್ವ, ನೀತಿ – ನಿಯಮಗಳಿಲ್ಲದಂತಿರುವ ಮಾರ್ಗಸೂಚಿಗಳು ಬೇಕೇ ಎಂದೂ ಕೇಳಿದ್ದಾರೆ.

error: Content is protected !!