ಮಾಸ್ಕ್ ಕಡ್ಡಾಯ, ಜನ ಸೇರದಂತೆ ನಿರ್ಬಂಧ

ಎರಡು ವಾರಗಳ ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಿನ ಜಾರಿಗೆ ಜಿಲ್ಲಾಡಳಿತ ಸಜ್ಜು

ಶುಕ್ರವಾರ ರಾತ್ರಿ 8ರಿಂದ ಸೋಮವಾರ ಬೆಳಿಗ್ಗೆ 5ರ ವರೆಗೆ ವಾರಾಂತ್ಯದ ಕರ್ಫ್ಯೂ

ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದರೆ ಕ್ರಮ ಖಂಡಿತ: ಡಿಸಿ ಎಚ್ಚರಿಕೆ

ದಾವಣಗೆರೆ, ಜ. 5 – ಕೊರೊನಾ ತಡೆಗಾಗಿ ಮಾಸ್ಕ್ ಕಡ್ಡಾಯಗೊಳಿಸಲು ಹಾಗೂ ಹೆಚ್ಚು ಜನ ಸೇರುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಜೊತೆಗೆ, ಹೆಚ್ಚು ಜನರನ್ನು ಸೇರಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜ.5ರ ರಾತ್ರಿ 10 ಗಂಟೆಯಿಂದ ಜ.19ರ ಬೆಳಗಿನ ಜಾವ 5 ಗಂಟೆಯವರೆಗೆ ವಿಧಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಜಿಲ್ಲಾಧಿ ಕಾರಿ ಮಹಾಂತೇಶ್ ಬೀಳಗಿ ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌, ಮಾಸ್ಕ್ ಹಾಕದಿರುವವರಿಗೆ ದಂಡ ವಿಧಿಸಲು ಹಾಗೂ ಗುಂಪು ಸೇರಿಸುವವರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಎಲ್ಲೆಡೆ ಜನರಲ್ಲಿ ಅರಿವು ಮೂಡಿಸಲಾಗುವುದು, ಮಾರ್ಗಸೂಚಿಗಳನ್ನು ಪಾಲಿಸದೇ ಇರುವವರ ವಿರುದ್ಧ ಕ್ರಮ ಖಂಡಿತ ಎಂದು ಎಚ್ಚರಿಸಿದ್ದಾರೆ.

ಜಾತ್ರೆ, ಸಮಾವೇಶಗಳು, ಪ್ರತಿಭಟನೆಗಳಿಗೆ ಮುಂದಿನ ಎರಡು ವಾರ ಅವಕಾಶ ಇರುವುದಿಲ್ಲ ಎಂದಿರುವ ಅವರು, ಬಸ್‌ಗಳಲ್ಲಿ ನಿಯಮ ಮೀರಿ ಹೆಚ್ಚು ಜನರು ಪ್ರಯಾಣಿಸುವುದನ್ನು ತಡೆಯಲು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಬೀಳಗಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟಗಳಲ್ಲಿ ಕಂಟ್ರೋಲ್ ರೂಂಗಳನ್ನು ತೆರೆಯಲಾಗುವುದು. ಜಿಲ್ಲಾ ಮಟ್ಟದಲ್ಲಿ ವಾರ್ ರೂಂ ಸ್ಥಾಪಿಸಲಾಗುವುದು ಎಂದು ಹೇಳಿದರು.

ಶುಕ್ರವಾರ ರಾತ್ರಿ 8ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ವಾರಾಂತ್ಯದ ಕರ್ಫ್ಯೂ ಇರುತ್ತದೆ. ಈ ಅವಧಿಯಲ್ಲಿ ಆಹಾರ, ಹಣ್ಣು, ತರಕಾರಿ, ಮೀನು, ಮಾಂಸ, ಹಾಲು, ಮೇವು, ದಿನಸಿಯಂತಹ ಅಂಗಡಿಗಳ ಮೇಲೆ ನಿರ್ಬಂಧ ಇರುವುದಿಲ್ಲ. ಬೀದಿ ವ್ಯಾಪಾರಿಗಳಿಗೂ ಅವಕಾಶ ಇರುತ್ತದೆ. ಪಡಿತರ ಅಂಗಡಿಗಳೂ ಕಾರ್ಯ ನಿರ್ವಹಿಸುತ್ತವೆ. ಆದರೆ, ಹೋಟೆಲ್‌ಗಳು ವಾರಾಂತ್ಯದ ಕರ್ಫ್ಯೂ ವೇಳೆಯಲ್ಲಿ ಮನೆಗಳಿಗೆ ಪೂರೈಸಲು ಹಾಗೂ ಪಾರ್ಸಲ್ ಕೊಡಲು ಮಾತ್ರ ಅವಕಾಶ ಇರುತ್ತದೆ ಎಂದು ಬೀಳಗಿ ಸ್ಪಷ್ಟಪಡಿಸಿದ್ದಾರೆ.

ಕೆಲ ಜಿಲ್ಲೆಗಳಲ್ಲಿ ಪ್ರಕರಣಗಳು ಕೆಲವೇ ದಿನಗಳಲ್ಲಿ ಎರಡು – ಮೂರು ಪಟ್ಟು ಹೆಚ್ಚಾಗುತ್ತಿವೆ. ಈ ಹಿಂದಿನ ಅಲೆಗಳಲ್ಲಿ ದಾವಣಗೆರೆಗೆ ಕೊರೊನಾ ಪ್ರಕರಣಗಳು ತಡವಾಗಿ ಬಂದಿದ್ದವು. ಈ ಬಾರಿಯೂ ಸಹ ಅದೇ ರೀತಿ ಆಗಬಹುದು. ಹೀಗಾಗಿ ಜಿಲ್ಲೆಯಲ್ಲಿ ಪ್ರಕರಣಗಳು ಇಲ್ಲ ಎಂದು ಮೈ ಮರೆಯಬಾರದು ಎಂದು ಬೀಳಗಿ ತಿಳಿಸಿದರು.

error: Content is protected !!